ತುಳು ಭಾಷೆಯನ್ನು ಬಳಸಿ, ಬೆಳೆಸಿ: ಚಂದ್ರಹಾಸ ಸುವರ್ಣ

Update: 2018-08-15 17:05 GMT

ಉಡುಪಿ, ಆ.15: ಅಂಡಮಾನ್ ದ್ವೀಪ ಸಮೂಹದಲ್ಲಿ ಬುಡಕಟ್ಟು ಜನಾಂಗದವರು ಬಳಸುತಿದ್ದ ಭಾಷೆಯೊಂದು ಇತ್ತೀಚೆಗೆ ಅಳಿದು ಹೋದಂತ ಸ್ಥಿತಿ ತುಳುವಿಗೆ ಬಾರದಿರಲು ತುಳುವರೆಲ್ಲರೂ ತಮ್ಮ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿ, ಬೆಳೆಸುವಂತೆ ಮುಂಬಯಿಯ ತುಳು ಸಾಹಿತಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಸಿಮಂತೂರು ಚಂದ್ರಹಾಸ ಸುವರ್ಣ ಕರೆ ನೀಡಿದ್ದಾರೆ.

ತುಳುಕೂಟ ಉಡುಪಿ ವತಿಯಿಂದ 24ನೇ ವರ್ಷದ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ತಮ್ಮ ತುಳು ಕಾದಂಬರಿ ‘ಮಣ್ಣ್‌ದ ಮದಿಪು’ಗೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

 ತುಳು ಭಾಷೆಯೂ ಅಳಿದು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ತುಳುವರ ಮೇಲಿದೆ. ಗುಜರಾತಿ, ಮರಾಠಿ ಜನರು ಪ್ರತಿ ಸಂವಹನಕ್ಕೂ ತಮ್ಮ ಭಾಷೆಯನ್ನು ಬಳಸುವಂತೆ ತುಳುವರೂ ತಮ್ಮ ಭಾಷೆಯನ್ನು ಅಭಿಮಾನದಿಂದ ಬಳಸುವಂತೆ ಅವರು ನುಡಿದರು.
ತಾನು ‘ಮಣ್ಣ್‌ದ ಮದಿಪು’ ಕಾದಂಬರಿಯನ್ನು ಪ್ರಶಸ್ತಿಗಾಗಿ ಬರೆಯಲಿಲ್ಲ. ನನ್ನ ಭಾಷೆಯ ಮೇಲಿನ ಅಭಿಮಾನದಿಂದ ಬರೆದಿದ್ದೇನೆ ಎಂದರು. ತಾನಿರುವ ಮಹಾರಾಷ್ಟ್ರ ಹಾಗೂ ಮುಂಬಯಿಯಲ್ಲಿರುವಷ್ಟು ತುಳು ಸಂಸ್ಕೃತಿ, ಇಂದು ಊರಿನಲ್ಲಿ ಕಾಣಲು ಸಿಗುತ್ತಿಲ್ಲ ಎಂದವರು ವಿಷಾಧಿಸಿದರು.

ಇಂದು ನಮ್ಮ ಕೋಲದಲ್ಲೂ ಇಂಗ್ಲೀಷ್ ಭಾಷೆ ಬಳಕೆಯಾಗುತ್ತಿದೆ. ಇದು ನಿಜವಾದ ದುರಂತ. ಪಾಡ್ದನವೂ ಇಂದು ಕೃತಿ ಚೌರ್ಯಕ್ಕೊಳಗಾಗುತ್ತಿದೆ. ಮರಾಠಿ ರಂಗಭೂಮಿಯ ಔನ್ನತ್ಯ ಹಾಗೂ ಅಲ್ಲಿ ಕಲಾವಿದರಿಗೆ ಸಿಗುವ ಗೌರವಕ್ಕೆ ಹೋಲಿಸಿದರೆ ತುಳು ರಂಗಭೂಮಿ ಹಿಂದುಳಿದಿದೆ ಎಂದವರು ಅಭಿಪ್ರಾಯ ಪಟ್ಟರು.

 ಅತಿಥಿಯಾಗಿ ಭಾಗವಹಿಸಿದ್ದ ಮಲ್ಪೆಯ ಉದ್ಯಮಿ ಎನ್.ಟಿ.ಅಮೀನ್ ಅವರು ಸಿಮಂತೂರು ಚಂದ್ರಹಾಸ ಸುವರ್ಣರಿಗೆ ಪಣಿಯಾಡಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ‘ಮಣ್ಣ್‌ದ ಮದಿಪು’ ಕಾದಂಬರಿಯನ್ನು ಖ್ಯಾತ ಸಾಹಿತಿ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಬಿಡುಗಡೆಗೊಳಿಸಿದರು.

ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ತುಳುಕೂಟದ ಗೌರವಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಸದಸ್ಯ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು.

ತುಳುಕೂಟ ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಮಿತಿಯ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ ಅತಿಥಿಗಳನ್ನು ಸ್ವಾಗತಿಸಿದರೆ, ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಪುಸ್ತಕವನ್ನು ಪರಿಚಯಿಸಿದರೆ, ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News