ಉಪ್ಪೂರಿನ ನೆರೆ ಬಾಧಿತ ಪ್ರದೇಶಗಳಿಗೆ ಸಚಿವೆ ಜಯಮಾಲ ಭೇಟಿ

Update: 2018-08-15 17:09 GMT

ಉಡುಪಿ, ಆ.15: ತಾಲೂಕಿನ ನೆರೆ ಬಾಧಿತ ಪ್ರದೇಶಗಳಾದ ಉಪ್ಪೂರು ಹಾಗೂ ಕುದ್ರುಬೆಟ್ಟು ಆಸುಪಾಸಿನ ಪ್ರದೇಶಗಳಿಗೆ ರಾಜ್ಯ ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲ ಬುಧವಾರ ಭೇಟಿ ನೀಡಿ ನೆರೆ ಹಾವಳಿಯ ತೀವ್ರತೆಯನ್ನು ಪರಿಶೀಲಿಸಿದರು.

ಉಪ್ಪೂರು ಗ್ರಾಪಂ ವ್ಯಾಪ್ತಿಯ ಕೆ.ಜಿ.ರೋಡ್, ಕುದ್ರುಬೆಟ್ಟು, ಹೆರೆಬೆಟ್ಟು ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು ಅಲ್ಲಿನ ಗ್ರಾಮಸ್ಥರೊಂದಿಗೆ ನೆರೆಯ ಪರಿಸ್ಥಿತಿಯ ಕುರಿತು ಸಮಾಲೋಚನೆ ನಡೆಸಿದರು.

ಜಲಾವೃತ ಪ್ರದೇಶದ ನಿವಾಸಿಗಳಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ವನ್ನು ಜಿಲ್ಲಾಡಳಿತ ಒದಗಿಸಲಿದೆ. ಜನರು ಧೈರ್ಯದಿಂದ ಇರುವಂತೆ ಸಚಿವೆ ಈ ಸಂದರ್ಭದಲ್ಲಿ ಸ್ಥಳೀಯರಿಗೆ ಮನವಿ ಮಾಡಿದರು. ಅವಶ್ಯಕ ಸಂದರ್ಭದಲ್ಲಿ ಜನತೆ ಸ್ಥಳೀಯಾಡಳಿತವನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಇದೇ ವೇಳೆ ಜಿಲ್ಲಾಡಳಿತ ಕೂಡ ನೆರೆ ಪೀಡಿತ ಪ್ರದೇಶಗಳ ಬಗ್ಗೆ ವಿಶೇಷ ನಿಗಾ ಇರಿಸಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಸಚಿವೆ ಸ್ಥಳೀಯ ರಿಗೆ ಧೈರ್ಯ ತುಂಬಿದರು.

ಶಾಲೆಗೆ ಭೇಟಿ:  ಜಲಾವೃತಗೊಂಡಿರುವ ಉಪ್ಪೂರು ಹೀರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಚಿವೆ ಜಯಮಾಲಾ, ಅಲ್ಲಿನ ಪರಿಸ್ಥಿತಿ ಅವಲೋಕನ ನಡೆಸಿದರು. ಶಾಲೆಯ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಸಚಿವರು ತಹಶೀಲ್ದಾರಿಗೆ ನಿರ್ದೇಶನ ನೀಡಿದರು.

ಎಲ್ಲಾ ನೆರೆಪೀಡಿತ ಪ್ರದೇಶಗಳ ಜನರಿಗೂ ಆಹಾರ ಪೂರೈಕೆಗೆ ತೊಂದರೆಯಾಗದಂತೆ ನಿಗಾ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಗತ್ಯ ಬಿದ್ದರೆ ನೆರೆಪೀಡಿತ ಪ್ರದೇಶದ ಜನರನ್ನು ಸ್ಥಳಾಂತರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಹಿಂದಿನ ಪ್ರಾಕೃತಿಕ ವಿಕೋಪಕ್ಕಾಗಿ 40 ಕೋಟಿ ರೂ.ಗಳ ಅನುದಾನಕ್ಕೆ ಪ್ರಸ್ತಾಪವನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಅದು ಬೇಗನೇ ಬಿಡುಗಡೆಗೊಳ್ಳುವಂತೆ ಪ್ರಯತ್ನಿಸುವುದಾಗಿ ತಿಳಿಸಿದರಲ್ಲದೇ, ಕಳೆದ ಮೂರು ದಿನಗಳ ನೆರೆಯಿಂದ ಆಗಿರುವ ಹಾನಿಯ ಕುರಿತು ಜಿಲ್ಲಾಧಿಕಾರಿಗಳಿಂದ ವರದಿಯನ್ನು ಪಡೆದು ಅದರ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರುತ್ನಿಸುವುದಾಗಿ ಭರವಸೆ ನೀಡಿದರು.

ಶೌಚಾಲಯ ನಿರ್ಮಾಣಕ್ಕೆ ಆದೇಶ

ನೆರೆಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಂಪ ಪೂಜಾರಿ ಎಂಬವರ ಮನೆಗೆ ಶೌಚಾಲಯ ಇಲ್ಲದಿರುವುದು ಸಚಿವರ ಗಮನಕ್ಕೆ ಬಂತು. ಈ ಬಗ್ಗೆ ಸಂಪ ಪೂಜಾರಿ ಹಾಗೂ ಅವರ ಪುತ್ರನಲ್ಲಿ ಸ್ವತಹ ಸಚಿವೆಯೇ ತಮ್ಮ ಮನೆಗೆ ಶೌಚಾಲಯ ಇದೆಯೇ ಎಂದು ವಿಚಾರಿಸಿದಾಗ, ತಾನು ಬಡವಿ ಯಾಗಿದ್ದು, ಶೌಚಗೃಹ ಕಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರದಿಂದ ಹೇಳಿಕೊಂಡರು.

ಸಂಪ ಪೂಜಾರಿ ಅವರ ನೋವು ಆಲಿಸಿದ ಸಚಿವೆ ಡಾ.ಜಯಮಾಲಾ ಅವರು, ನೆರೆ ನೀರು ಇಳಿದ ತಕ್ಷಣ ಇವರಿಗೆ ಸರಕಾರಿ ಯೋಜನೆಯ ಮೂಲಕ ಶೌಚಾಲಯ ನಿರ್ಮಿಸಿಕೊಡಬೇಕೆಂದು ಸ್ಥಳದಲ್ಲಿಯೇ ತಹಶೀಲ್ದಾರ್‌ಗೆ ಆದೇಶ ನೀಡಿದರು. ಶೌಚಾಲಯ ಕಟ್ಟಿಕೊಡಲು ಯಾವುದೇ ರೀತಿಯಲ್ಲಿಯೂ ವಿಳಂಬವಾದಂತೆ ನೋಡಿಕೊಳ್ಳಬೇಕೆಂದು ತಹಶೀಲ್ದಾರ್ ಅವರಿಗೆ ತಾಕೀತು ಮಾಡಿದರು.

ಸಚಿವರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್, ಶಾಲಿನಿ ಪುರಂದರ್, ಜಯಶ್ರೀ ಕೃಷ್ಣರಾಜ್, ಚಂದ್ರಿಕಾಶೆಟ್ಟಿ, ರಮೇಶ್ ಕುಂದರ್, ರಮೇಶ್ ಕರ್ಕೇರಾ, ಉಪ್ಪೂರು ಗ್ರಾಪಂ ಅಧ್ಯಕ್ಷೆ ಆರತಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕೃಷಿ ಇಲಾಖೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ಬಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News