ಕನ್ನಡ, ತುಳು ಸಾಹಿತಿ ಕುದ್ರೆಪಾಡಿ ಜಗನ್ನಾಥ ಆಳ್ವ ನಿಧನ

Update: 2018-08-15 17:41 GMT

ಮಂಗಳೂರು, ಆ.15: ಮಂಡ್ಯ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕನ್ನಡ, ತುಳು ಸಾಹಿತಿ ಕುದ್ರೆಪಾಡಿ ಜಗನ್ನಾಥ ಆಳ್ವ (83) ಅಲ್ಪಕಾಲದ ಅಸೌಖ್ಯದಿಂದ ನಗರದ ಸುಲ್ತಾನ್ ಬತ್ತೇರಿಯ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.

1970ರಲ್ಲಿ ಗಡಿನಾಡು ತಲಪಾಡಿಯಲ್ಲಿ ವಿಜಯಾ ಬ್ಯಾಂಕ್ ಮೂಲಕ ವೃತ್ತ ಜೀವನ ಆರಂಭಿಸಿದ ಅವರು ಜನಪರ ನಡವಳಿಕೆಯಿಂದ ಜನಪ್ರಿಯ ಅಧಿಕಾರಿಯಾಗಿದ್ದರು. ಸಾಹಿತ್ಯ ಮತ್ತು ಕಲೆಗಳಲ್ಲಿ ಆಸಕ್ತಿ ಹೊಂದಿದ್ದ ಅವರು ಹಲವಾರು ಕಥೆ, ಕವನ, ನಾಟಕ ಮತ್ತು ಕಾದಂಬರಿಗಳನ್ನು ರಚಿಸಿದ್ದರು.

ಇವರ ‘ಗುತ್ತುದ ಗೌರವ’ ತುಳು ಕೃತಿಗೆ ಪಣಿಯಾಡಿ ಪ್ರಶಸ್ತಿ’ ಲಭಿಸಿದೆ. ‘ಮಂಗಳುರು ಮಲ್ಲಿಗೆ’(ಕನ್ನಡ), ‘ಕುಡ್ಲ ಮಲ್ಲಿಗೆ’(ತುಳು) ಪ್ರಕಟವಾಗಿವೆ. ಇವರು ಬರೆದ ‘ಗ್ರಾಮ ಸ್ವರಾಜ್ಯ’ ತುಳು ನಾಟಕ ರಾಷ್ಟ್ರ ಮಟ್ಟದಲ್ಲಿ ಬಹುಮಾನ ಗಳಿಸಿತ್ತು.ಇವರು ಬರೆದ ಸಣ್ಣ ಕತೆಗಳು, ಕವನಗಳು, ಅಂಕಣಗಳು, ವಿಮರ್ಶಾ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮಂಗಳೂರಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಆಳ್ವರು, ತನ್ನ ಹಿರಿಯ ಸಹೋದರ, ಸಾಹಿತಿ ಕೆ.ಆಳ್ವ, ಪತ್ನಿ, ಜೀವನ ಲತಾ, ಹಿರಿಯ ಪುತ್ರ ಕ್ರೀಡಾಪಟು ಅನಿಲ್ ಜೆ. ಆಳ್ವ, ಕಿರಿಯ ಪುತ್ರ ಸೂರಜ್ ಆಳ್ವ, ಪುತ್ರಿ ಶರಿತಾ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News