​ದ.ಕ:ಮಳೆಹಾನಿಗೆ 100 ಕೋಟಿ ರೂ ಪರಿಹಾರ ನೀಡಲು ಸಿ.ಎಂ ಜೊತೆ ಸಮಾಲೋಚನೆ-ಯು.ಟಿ.ಖಾದರ್‌

Update: 2018-08-15 18:14 GMT

ಮಂಗಳೂರು, ಆ.15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಹಾನಿ ಹಿನ್ನೆಲೆಯಲ್ಲಿ 100 ಕೋಟಿ ರೂ.ವಿಶೇಷ ಅನುದಾನವನ್ನು ನೀಡಬೇಕೆಂದು ರಾಜ್ಯದ ಮುಖ್ಯ ಮಂತ್ರಿ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದಾಗಿ ಒಟ್ಟು 11 ಜನರು ಮೃತಪಟ್ಟಿದ್ದಾರೆ. ಮಂಗಳವಾರ ನೇತ್ರಾವತಿ ನದಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯಲಾರಂಂಭಿಸಿದ್ದು ಇಂದು ಇಳಿ ಮುಖವಾಗಿದೆ. ಜಿಲ್ಲೆಯ ಆಸುಪಾಸಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಇಲ್ಲಿನ ನದಿ ನೀರಿನಲ್ಲಿ ಏರಿಕೆಯಾಗಿದೆ. ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರ ಸಂಗಮ ಪ್ರದೇಶದಲ್ಲಿ ನೀರಿನ ಮಟ್ಟ 32 ಅಡಿಗೆ ಏರಿಕೆಯಾಗಿದೆ. ಬಂಟ್ವಾಳದಲ್ಲಿ ನದಿ ನೀರಿನ ಮಟ್ಟ ಏರಿಕೆಯಾದ ಕಾರಣ ಮತ್ತು ಜಿಲ್ಲೆಯ ಶಾಂಭವಿ ನದಿ ನೀರಿನಲ್ಲೂ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಉಪ್ಪಿನಂಗಡಿಯಲ್ಲಿ 110 , ಬಂಟ್ವಾಳದಲ್ಲಿ 25, ಉಳ್ಳಾಲ, ಉಳಿಯ ಕಲ್ಲಾಪು ಮೊದಲಾದ ಕಡೆಗಳಲ್ಲಿ  ಜನರನ್ನು ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ನಾಳೆ ತೆರವಾಗಲಿದೆ

ಭೂ ಕುಸಿತದಿಂದ ಸ್ಥಗಿತಗೊಂಡಿರುವ ಶಿರಾಡಿಯ ವಾಹನ ಸಂಚಾರಕ್ಕೆ ತೆರವುಗೊಳಿಸಲು ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಶಿರಾಡಿ ಘಾಟಿಯ ಸಂಚಾರದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು dk.nic.in ವೆಬ್ ಸೈಟ್‌ಮೂಲಕ ಮಾಹಿತಿ ನೀಡಲಾಗುದು. ಸಂಪಾಜೆಯಲ್ಲೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಖಾದರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆ ಹಾನಿ ನೆರವು ನೀಡಲು ನೋಡೆಲ್ ಕೇಂದ್ರ :-

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ವಿವಿಧ ಕಡೆಗಳಲ್ಲಿ ನೊಡೆಲ್ ಕೇಂದ್ರಗಳನ್ನು ತೆರೆಯಲಾಗಿದೆ. ಅಪಾಯದ ಸೂಚನೆ ಇರುವ ಪ್ರದೇಶಗಳನ್ನು ಗುರುತಿಸಲಾಗಿದೆ. ಮಂಗಳೂರು ತಾಲೂಕಿನ ಕಲ್ಲಾಪು, ಪೆರ್ಮನ್ನೂರು, ಜಪ್ಪಿನಮೊಗರು, ಅದ್ಯಪಾಡಿ, ಒಳವೂರು, ಆನೆಗುಂಡಿ, ಅಳಕೆ, ಬಿಜೈ, ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು, ಜಕ್ರಿ ಬೆಟ್ಟು, ಬಸ್ತಿಪಡ್ಪು, ಸರಪಾಡಿ, ನಾವೂರು, ಬೆಳ್ತಂಗಡಿ ತಾಲೂಕಿನ ಶಿಶಿಲ, ಚಾರ್ಮಾಡಿ, ವೇಣೂರು, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹೊಸಮಠ, ಶಿರಾಡಿ, ಬಾಳ್ತಿಲ, ಉದನೆ, ಸುಳ್ಯತಾಲೂಕಿನ ಸುಬ್ರಹ್ಮಣ್ಯ , ಕಡಬ ತಾಲೂಕಿನ ಹೊಸಮಠ, ನೂಜಿ,ಕುಂತೂರು, ಪೆರಾಬೆ, ಆಲಂಗಾರು, ಬಿಳಿನೆಲೆ. ಮೂಡುಬಿದ್ರೆ ತಾಲೂಕಿನ ವಾಲ್ಪಾಡಿ, ಮೂಡುಬಿದ್ರೆ, ಕೊಣಾಜೆ, ಮುಲ್ಕಿ ಹೋಬಳಿ ಕೇಂದ್ರದ ಮುಲ್ಕಿ ವಿಶೇಷ ನೋಡೆಲ್ ಕೇಂದ್ರಗಳನ್ನು ಗುರುತಿಸಲಾಗಿದೆ.

ಜಿಲ್ಲಾಧಿಕಾರಿ ತಹಶೀಲ್ದಾರ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ತುರ್ತು ಸಹಾಯಕ್ಕಾಗಿ ಟೋಲ್‌ಫ್ರೀ ಸಂಖ್ಯೆ 1077ಕ್ಕೆ ಕರೆ ಮಾಡಬಹುದಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ಪಡೆಯ ಆಗಮನ ತಂಡ:- ದಕ್ಷಿಣ ಕನ್ನಡ ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ತಂಡ ಜಿಲ್ಲೆಗೆ ಆಗಮಿಸಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News