ಕಸ್ತೂರಿ ರಂಗನ್ ವರದಿ ವಿರೋಧಿಸುವವರು ಕಾಂಗ್ರೆಸ್ ಜೊತೆ ಕೈ ಜೋಡಿಸಲಿ: ಬಿಜೆಪಿಯ ಆರೋಪಕ್ಕೆ ಮಾಜಿ ಸಚಿವ ರೈ ಸವಾಲು

Update: 2018-08-16 14:41 GMT

ಮಂಗಳೂರು, ಆ.16: ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರಕಾರವು ಜಾರಿಗೊಳಿಸಲು ಸನ್ನದ್ಧವಾಗಿದೆ. ಇದರ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕ ಹರೀಶ್ ಪೂಂಜಾ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸಲುವಾಗಿ ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸಿ ಜನರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಮಾಜಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಸ್ತೂರಿ ರಂಗನ್ ವರದಿಯ ವಿರುದ್ಧ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಅದನ್ನು ತಿರಸ್ಕರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಕೇಂದ್ರಕ್ಕೆ ಮನವಿ ಸಲ್ಲಿಸುತ್ತಾ ಬಂದಿತ್ತು. ನಾನು ಅರಣ್ಯ ಸಚಿವನಾಗಿದ್ದಾಗ ಈ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೂ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗಿದೆ. ಒಂದು ವೇಳೆ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿದರೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಹೋರಾಟ ಕೈಗೆತ್ತಿಕೊಳ್ಳಲಿದೆ. ಬಿಜೆಪಿಗರು ಕಸ್ತೂರಿ ರಂಗನ್ ವರದಿಗೆ ವಿರುದ್ಧವಾಗಿದ್ದರೆ ನಮ್ಮ ಹೋರಾಟದಲ್ಲಿ ಕೈ ಜೋಡಿಸಲಿ ಎಂದು ಸವಾಲು ಹಾಕಿದರು.

ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಕುರಿತು ಡಾ. ಕಸ್ತೂರಿ ರಂಗನ್ ಸಲ್ಲಿಸಿರುವ ವರದಿಗೆ ಸಂಬಂಧಿಸಿ 2014ರಲ್ಲಿ ಕರಡು ಅಧಿಸೂಚನೆ ಹೊರಡಿಸಿತ್ತು. ಅದರ ಪ್ರಕಾರ ರಾಜ್ಯದ ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಮಡಿಕೇರಿ, ಹಾಸನ, ಶಿವಮೊಗ್ಗ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 40 ತಾಲೂಕುಗಳ 1,576 ಗ್ರಾಮಗಳ 44,448 ಚ.ಕಿ.ಮೀ. ಭೂ ಪ್ರದೇಶಗಳ ಪೈಕಿ 20,668 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪ ಸಲ್ಲಿಸಿತ್ತು. ಅಲ್ಲದೆ ಈ ಅಧಿಸೂಚಿತ ಪ್ರದೇಶಗಳಲ್ಲಿ ಶೇ.20ಕ್ಕಿಂತಲೂ ಅಧಿಕ ಅರಣ್ಯ ಪ್ರದೇಶ ಹೊಂದಿರುವ ಗ್ರಾಮಗಳನ್ನು ಪರಿಸರ ಸೂಕ್ಷ್ಮಪ್ರದೇಶಗಳ ವ್ಯಾಪ್ತಿಗೆ ಸೇರಿಸಲು ಸೂಚಿಸಲಾಗಿದೆ. ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕಲ್ಲು-ಮರಳು ಗಣಿಗಾರಿಕೆ ಇತ್ಯಾದಿ ಮಾಡುವಂತಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನನ್ನ ಅಧ್ಯಕ್ಷತೆ (ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ)ಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿತ್ತು. ಅಲ್ಲದೆ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಆರ್.ಎಂ.ಎನ್. ಶಹಾಯಿ ಅಧ್ಯಕ್ಷತೆಯಲ್ಲಿ ಭೌತಿಕ ಪರಿಶೀಲನೆ ಮಾಡಲು ರಾಜ್ಯಮಟ್ಟದ ತಜ್ಞರ ಸಮಿತಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನೂ ರಚಿಸಲಾಗಿತ್ತು. ಸಚಿವ ಸಂಪುಟ ಉಪ ಸಮಿತಿಯು ಸಲ್ಲಿಸಿದ ಶಿಫಾರಸ್ಸನ್ನು ಅನುಮೋದಿಸಿದ ರಾಜ್ಯ ಸರಕಾರ ಕೇಂದ್ರಕ್ಕೆ ಮಧ್ಯಂತರ ಅಭಿಪ್ರಾಯ ತಿಳಿಸಿತ್ತು. ಆದಾಗ್ಯೂ ಕೇಂದ್ರ ಸರಕಾರ ಕರಡು ಅಧಿಸೂಚನೆ ಪ್ರಕಟಿಸಿ ಪದೇ ಪದೇ ರಾಜ್ಯ ಸರಕಾರದ ವರದಿ ಸಲ್ಲಿಸಲು ಸೂಚಿಸುತ್ತಲೇ ಇತ್ತು. ಈ ನಿಟ್ಟಿನಲ್ಲಿ ರಚಿಸಲಾದ ಸಮಿತಿಯು ಈ ವರದಿಯನ್ನು ತಿರಸ್ಕರಿಸಿತ್ತಲ್ಲದೆ ರಾಜ್ಯ ಸರಕಾರ ಕೂಡಾ ಇದನ್ನೇ ಪುನರುಚ್ಚರಿಸಿತ್ತು. ಆದಾಗ್ಯೂ ಕೇಂದ್ರ ಸರಕಾರ ಈ ವರದಿಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಇದರ ಬಗ್ಗೆ ಮಾಹಿತಿ ಪಡೆದ ಬಿಜೆಪಿಗರು ರಾಜಕೀಯ ಕಾರಣಕ್ಕಾಗಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ರಾಜ್ಯ ತನ್ನ ಅಭಿಪ್ರಾಯವನ್ನು ಮಾತ್ರ ತಿಳಿಸುತ್ತದೆ. ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಕೇಂದ್ರಕ್ಕಿದೆ. ಅದರಂತೆ ಕೇಂದ್ರ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಬಗ್ಗೆ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಆರೋಪ ಹೊರಿಸುವ ಮುನ್ನ ಅದರಲ್ಲೂ ಶಾಸಕ ಹರೀಶ್ ಪೂಂಜಾ ಕಸ್ತೂರಿ ರಂಗನ್ ವರದಿಯನ್ನೊಮ್ಮೆ ಓದಲಿ. ಬಳಿಕ ಪ್ರತಿಕ್ರಿಯಿಸಲಿ ಎಂದು ರಮಾನಾಥ ರೈ ಹೇಳಿದರು.

ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಜಾರಿಗೊಳಿಸಿದರೆ ಕಾಂಗ್ರೆಸ್ ಹೋರಾಟ ಮಾಡಲಿದೆ. ಬಿಜೆಪಿಗರಿಗೆ ಕಸ್ತೂರಿ ರಂಗನ್ ಜಾರಿಯಾಗುವುದು ಬೇಡ ಎಂದಾದರೆ, ನಮ್ಮ ಹೋರಾಟದಲ್ಲಿ ಕೈ ಜೋಡಿಸಲಿ. ಅದು ಬಿಟ್ಟು ರಾಜಕೀಯ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ರೈ ನುಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮೇಯರ್ ಭಾಸ್ಕರ ಮೊಯ್ಲಿ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ವಿಠಲ ಶೆಟ್ಟಿ, ಸಂತೋಷ್ ಶೆಟ್ಟಿ, ಯು.ಬಿ.ಸಲೀಂ, ಪೃಥ್ವಿರಾಜ್ ಆರ್.ಕೆ., ನಝೀರ್ ಬಜಾಲ್ ಮತ್ತಿತರರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News