ಕೇಂದ್ರ ಸರಕಾರದಿಂದ ಮಲತಾಯಿ ಧೋರಣೆ: ಐವನ್ ಡಿಸೋಜಾ ಆರೋಪ

Update: 2018-08-16 14:46 GMT

ಮಂಗಳೂರು, ಆ.16: ನೆರೆ ಪೀಡಿತ ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ನೆರೆಯಿಂದ ತತ್ತರಿಸಿರುವ ಕೇರಳವು 1000 ಕೋಟಿ ರೂ. ಪರಿಹಾರ ಮೊತ್ತ ಕೇಳಿದ್ದರೂ 100 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆಗೊಳಿಸಿದೆ. ಇದೇ ವೇಳೆ ಕರ್ನಾಟಕಕ್ಕೆ ಚಿಕ್ಕಾಸನ್ನೂ ನೀಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕ ಮತ್ತು ಕೇರಳ ನೆರೆಪೀಡಿತ ಪ್ರದೇಶಗಳಿಗೆ ಪ್ರಧಾನಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ದ.ಕ.ಜಿಲ್ಲೆಯಲ್ಲಿ ಪ್ರಾಕೃತಿಕ ಹಾನಿಯಿಂದ 100 ಕೋಟಿ ರೂ.ಗಳಿಗೂ ಅಧಿಕ ಹಾನಿಯಾಗಿದೆ. ಈಗಾಗಲೇ ಜಿಲ್ಲಾಡಳಿತ 97 ಕೋಟಿ ರು.ಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ರಸ್ತೆ ವಿದ್ಯುತ್ ಕಂಬ, ಮನೆ, ಗುಡ್ಡ ಕುಸಿತ, ಜಾನುವಾರು, ಸೊತ್ತು, ಕೃಷಿನಾಶ ವ್ಯಾಪಕವಾಗಿ ಸಂಭವಿಸಿದೆ. ಜಿಲ್ಲೆಗೆ 150 ಕೋಟಿ ರು. ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಅಲ್ಲದೆ ಕೇಂದ್ರವೂ ಅಡಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ನ್ನು ಬಿಡುಗಡೆಗೊಳಿಸಬೇಕು ಎಂದು ಐವನ್ ಡಿಸೋಜಾ ಒತ್ತಾಯಿಸಿದರು.

ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಬೇಕು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಬಿಜೆಪಿಗರು ಹಾಗೂ ಸಂಸದರು ಮಹದಾಯಿ ವಿಚಾರದಲ್ಲಿ ಕೋರ್ಟ್ ತೀರ್ಪನ್ನು ಬೆಂಬಲಿಸಿ ಮಾತನಾಡುತ್ತಿದ್ದಾರೆ. ಇದರ ಬದಲು ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವಂತೆ ಪ್ರಧಾನಿ ಮೇಲೆ ಒತ್ತಡ ತರುವ ಕೆಲಸವನ್ನು ಮಾಡಬೇಕು ಎಂದು ಐವನ್‌ಡಿಸೋಜಾ ಹೇಳಿದರು.

ಜಿಲ್ಲಾಡಳಿತ ಕ್ರಮಕ್ಕೆ ಅಸಮಾಧಾನ
ಜಿಲ್ಲೆಯಲ್ಲಿ ಸಂಭಾವ್ಯ ಪ್ರಾಕೃತಿಕ ಹಾನಿ ಪ್ರದೇಶಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟು ಮುಂಚಿತವಾಗಿ ತಿಳಿದಿತ್ತು. ಆದರೂ ಪ್ರಾಕೃತಿಕ ಹಾನಿ ಸಂಭವಿಸಿದಾಗ ಸೂಕ್ತವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಹಿನ್ನಡೆ ಅನುಭವಿಸಿದೆ. ಮುಖ್ಯವಾಗಿ ರಸ್ತೆ ಸಂಪರ್ಕ ಕಡಿತ ಸಂದರ್ಭದಲ್ಲಿ ಅವುಗಳನ್ನು ಯಥಾಸ್ಥಿತಿಗೆ ತರುವಲ್ಲಿ ವಿಳಂಬ ಮಾಡಲಾಗುತ್ತಿದೆ. ಬೆಂಗಳೂರು-ಮಂಗಳೂರು ಸಂಪರ್ಕದ ಪ್ರಮುಖ ಕೊಂಡಿ ಶಿರಾಡಿ ಘಾಟ್ ಕುಸಿತಗೊಂಡಿದೆ. ಮಡಿಕೇರಿಯಿಂದಲೂ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಇಂತಹ ತೊಂದರೆ ಸಂಭವಿಸಿದಾಗ ಪರಿಸ್ಥಿತಿಯನ್ನು ಯಥಾಸ್ಥಿತಿಗೆ ತರಲು ಕ್ಷಿಪ್ರ ಕಾರ್ಯಾಚರಣೆ ನಡೆಸಬೇಕು. ಆದ್ದರಿಂದ ಶಿರಾಡಿ ಹಾಗೂ ಮಡಿಕೇರಿಯಲ್ಲಿ ತಕ್ಷಣ ಅಡೆತಡೆಗಳನ್ನು ನಿವಾರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಜಿಲ್ಲಾಡಳಿತ ಕ್ಷಿಪ್ರವಾಗಿ ಸ್ಪಂದಿಸಬೇಕಾಗಿದೆ ಎಂದು ಐವನ್ ಡಿಸೋಜಾ ಹೇಳಿದರು.

ಪ್ರಾಕೃತಿಕ ತೊಂದರೆ ಸಂಭವಿಸಿದ ಕೂಡಲೇ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಅವರ ಅನುಕೂಲವನ್ನು ನೋಡಿಕೊಂಡರೇ ವಿನಃ ಪ್ರಯಾಣಿಕರ ಸುರಕ್ಷತೆಗೆ ಗಮನ ನೀಡಿಲ್ಲ. ರಸ್ತೆ ಬಂದ್ ಆಗುವ ಸಂದರ್ಭಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿತ್ತು ಎಂದು ಅವರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News