10.6 ಮೀಟರ್ ಮಟ್ಟದ ಅಪಾಯದಲ್ಲಿ ಹರಿಯುತ್ತಿರುವ ನೇತ್ರಾವತಿ : ಬಂಟ್ವಾಳದಲ್ಲಿ ಹೈ ಅಲರ್ಟ್

Update: 2018-08-16 18:57 GMT

ಬಂಟ್ವಾಳ, ಆ.16: ಒಂದು ದಿನದ ಬಿಡುವಿನ ಬಳಿಕ ಬುಧವಾರ ರಾತ್ರಿಯಿಂದ ಬಂಟ್ವಾಳ ತಾಲೂಕಿನಲ್ಲಿ ಮಳೆ ಅಬ್ಬರಿಸಿದ ಪರಿಣಾಮ ಗುರುವಾರ ಮತ್ತೆ ನೇತ್ರಾವತಿ ನದಿಯಲ್ಲಿ ನೀರು ಉಕ್ಕಿ ಹರಿದಿದ್ದು, ಜನರು ತತ್ತರಿಸಿದ್ದಾರೆ. ರಾತ್ರಿ 10.6 ಮೀ.ನಲ್ಲಿ ನೇತ್ರಾವತಿ ನದಿಯು ಉಕ್ಕಿ ಹರಿಯುತ್ತಿದ್ದು, ಬಂಟ್ವಾಳವನ್ನು ಹೈಅಲರ್ಟ್ ಎಂದು ಘೋಷಿಸಲಾಗಿದೆ.

ಬುಧವಾರ ರಾತ್ರಿ 8ಮೀ.ನಲ್ಲಿ ಹರಿಯುತ್ತಿದ್ದ ನೇತ್ರಾವತಿ ಗುರುವಾರ ಮುಂಜಾನೆ ಹೊತ್ತಿಗೆ ಏಕಾಏಕಿಯಾಗಿ 9ಮೀ.ಗೆ ಏರಿಕೆಯಾಗಿದ್ದು, ಬಳಿಕ ನೋಡುನೋಡುತ್ತಿದ್ದಂತೆ ನೀರಿನ ಏರಿಕೆಯಾಗಿದೆ. ಮಧ್ಯಾಹ್ನ ಸುಮಾರು 11ಗಂಟೆಯ ನಂತರ ಸಂಜೆ 4ಗಂಟೆಯವರೆಗೆ ಮಳೆ ಕಡಿಮೆಯಿತ್ತಾದರೂ ನೇತ್ರಾವತಿನದಿಯ ನೀರು ಏರಿಕೆಯಾಗುತ್ತಲೇ ಇತ್ತು. ಎಎಂಆರ್ ಡ್ಯಾಂನಲ್ಲಿ ಆಗಾಗ ಸೈರನ್ ಬಾರಿಸಿ ನೀರನ್ನು ಹೊರಬಿಡಲಾಗುತ್ತಿತ್ತು.

ತಾಲೂಕಿನಾದ್ಯಂತ ಗಾಳಿ ಮಳೆಗೆ ಎರಡು ಮನೆಗಳು ಧರಾಶಾಯಿಯಾಗಿದ್ದರೆ, ವಿವಿಧ ಕಡೆಗಳಲ್ಲಿ 30ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ಹಾಗೆಯೇ 30ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿದೆ. ಹಲವಾರು ಅಡಿಕೆ ತೋಟ, ಕೃಷಿ ಭೂಮಿ ಮುಳುಗಡೆಯಾಗಿದೆ. ಅಲ್ಲದೆ, ಬಂಟ್ವಾಳ ಬಡ್ಡಕಟ್ಟೆಯ ಹಿಂದು ರುಧ್ರಭೂಮಿ, ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಸ್ಥಾನ, ಬ್ರಹ್ಮರಕೂಟ್ಲುವಿನ ಬ್ರಹ್ಮನಾಗ ಸನ್ನಿಧಿ, ಬಿ.ಸಿ.ರೋಡಿನ ಪೊಸಳ್ಳಿಯಲ್ಲಿರುವ ಕುಲಾಲ ಸಮುದಾಯ ಭವನ, ಅಜಿಲಮೊಗರು ಮಸೀದಿ ಕಟ್ಟಡಕ್ಕೂ ನೀರು ನುಗ್ಗಿದೆ.  

ಎಲ್ಲೆಲ್ಲಿ ನೆರೆ?:

ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡವಿನ ಬಾಗಿಲು ಕೊಪ್ಪಳ ಎಂಬಲ್ಲಿ ಎಂಟು ಮನೆಗಳ ಸುತ್ತ ನೀರು ತುಂಬಿಕೊಂಡಿದೆ. ಮನೆಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದು, ಸ್ಥಳೀಯರ ನೆರೆವಿನೊಂದಿಗೆ ಮನೆಯಲ್ಲಿದ್ದ ವಸ್ತುಗಳನ್ನು ಬೇರೆಡೆ ಸಾಗಿಸಲಾಗಿದೆ. ಗುಲಾಬಿ, ಜಗನ್ನಾಥ ಸುಂದರ ಮೂಲ್ಯ, ಜಗನ್ನಾಥ ಹಂಝ, ವಿಶ್ವನಾಥ, ಕೇಶವ, ಅಬ್ದುಲ್ ಮುತ್ತಾಲಿಬ್ ವಸಂತ ಮೊದಲಾದವರ ಮನೆಗಳು ಜಲಾವೃತ್ತಗೊಂಡಿದೆ. ಸರಪಾಡಿಯ ತಗ್ಗು ಪ್ರದೇಶಗಳು ಕೂಡಾ ಜಲಾವೃತಗೊಂಡಿದೆ.

ಮಣಿಹಳ್ಳದ ಕೊಂಬ್ರಬೈಲು ಎಂಬಲ್ಲಿ ಅಣ್ಣು ಮೂಲ್ಯ ಎಂಬವರ ಮನೆಗೆ ಮರಬಿದ್ದು, ಸಂಪೂರ್ಣ ಜಖಂಗೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬವನ್ನು ಬಂಟ್ವಾಳ ಪ್ರವಾಸಿ ಕೇಂದ್ರದ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅದೇ ರೀತಿ ಕೊಡಂಬೆಟ್ಟು ಗ್ರಾಮದ ಚಿನ್ನಪ್ಪ ಪೂಜಾರಿ ಎಂಬವರ ಮನೆಯೂ ಕುಸಿದು ಬಿದ್ದಿದೆ.

ಪಾಣೆಮಂಗಳೂರಿನ ಆಲಡ್ಕ, ಗೂಡಿನಬಳಿ, ಬಿ.ಸಿ.ರೋಡಿನ ನಂದರಬೆಟ್ಟುವಿನಲ್ಲಿ ವಾಸ್ತವ್ಯವಿರುವ ಎಲ್ಲ ಮನೆಗಳಿಗೆ ನೀರು ನುಗ್ಗಿರುವುದರಿಂದ ಇಲ್ಲಿನ ಕುಟುಂಬಸ್ಥರನ್ನು ಮಂಗಳವಾರವೇ ಸ್ಥಳಾಂತರಗೊಳಿಸಲಾಗಿದೆ. ಗೂಡಿನಬಳಿ ಹಾಗೂ ಆಲಡ್ಕ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮನೆಗಳ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಅದೇ ರೀತಿ ನಂದರಬೆಟ್ಟುವಿನಲ್ಲಿ 20 ಮನೆಗಳ ಕುಟುಂಸ್ಥರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ತಲಪಾಡಿಯಲ್ಲಿ ಒಂದು ಮನೆ, ಬಸ್ತಿಪಡ್ಪುವಿನಲ್ಲಿ 15 ಮನೆಗಳು ಹಾಗೂ 12 ಅಂಗಡಿಯ ಸಾಮಾಗ್ರಿಗಳನ್ನು ತೆರವು ಮಾಡಲಾಗಿದೆ. ಬಸ್ತಿಪಡ್ಪುವಿನಲ್ಲಿ ವಾಸ್ತವ್ಯವಿರುವ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮನೆಯ ಕಂಪೌಂಡ್‍ನೊಳಗೆ ನೀರು ನುಗ್ಗಿದೆ. ವಿದ್ಯುತ್ ಸರಬರಾಜಿನಲ್ಲೂ ಆಗಾಗ ವ್ಯತ್ಯಯವಾಗುತ್ತಿದ್ದು, ಒಟ್ಟಾರೆಯಾಗಿ ಮಳೆಯಬ್ಬರಕ್ಕೆ ಸಿಲುಕಿ ಬಂಟ್ವಾಳದ ಜನತೆ ತತ್ತರಿಸಿದ್ದಾರೆ.

ಬಂಟ್ವಾಳ ಸುತ್ತಮುತ್ತಲಿನ ಪ್ರದೇಶಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಕಂಚಿಕಾರಪೇಟೆ, ಬಸ್ತಿಪಡ್ಪು, ಆಲಡ್ಕ, ನಂದರಬೆಟ್ಟು, ತಲಪಾಡಿ, ಸಜೀಪ, ಕಾರಾಜೆ, ಬ್ರಹ್ಮರಕೊಟ್ಲು, ಫರಂಗಿಪೇಟೆ ಮೊದಲಾದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದಲ್ಲದೇ, ಕೆಲ ಪ್ರದೇಶಗಳಲ್ಲಿ ರಸ್ತೆಯಲ್ಲೇ ನೆರೆ ನೀರು ಬಿದ್ದಿರುವುದರಿಂದ ವಾಹನಸಂಚಾರಕ್ಕೆ ತಡೆವುಂಟಾಯಿತು.

ಸುತ್ತು ಬಳಸಿ ಪೇಟೆಗೆ:
ಬಸ್ತಿಪಡ್ಪು ಮತ್ತು ಜಕ್ರಿಬೆಟ್ಟುವಿನಲ್ಲಿ ರಸ್ತೆಗೆ ನೀರು ನುಗ್ಗಿರುವುದರಿಂದ ಬಂಟ್ವಾಳ ಪೇಟೆಯನ್ನು ನೆರೆವಿಮೋಚನಾರಸ್ತೆ ಇಲ್ಲವೇ ಬೈಪಾಸ್ ಮೂಲಕವೇ ಸಂಪರ್ಕಿಸಬೇಕಾಗಿತ್ತು. ಬಡ್ಡಕಟ್ಟೆಯಲ್ಲಿರುವ ಪುರಸಭೆಯ ಎರಡು ವಾಣಿಜ್ಯ ಸಂಕಿರ್ಣದ ಕೆಳ ಅಂತಸ್ತಿನ ಅಂಗಡಿಗಳು ಮುಳುಗಡೆಯಾಗಿವೆ.

ಗಂಜಿಕೇಂದ್ರಗಳು:
ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆ, ಬಂಟ್ವಾಳ ಪ್ರವಾಸಿ ಮಂದಿರ, ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ನಂದರಬೆಟ್ಟುವಿನಲ್ಲಿ ಸ್ಥಳೀಯರೇ ಗಂಜಿಕೇಂದ್ರವನ್ನು ತೆರೆದಿದ್ದಾರೆ. ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಗಂಜಿಕೇಂದ್ರ ಪೂರ್ತಿ ವ್ಯವಸ್ಥೆಯನ್ನು ಬಂಟ್ವಾಳ ಪುರಸಭೆಯ ವತಿಯಿಂದ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ತಿಳಿಸಿದ್ದಾರೆ. 

ಇನ್ನು ಎರಡು ದಿನಗಳ ಮಟ್ಟಿಗೆ ಮಳೆಯ ಅರ್ಭಟವಿರುವ ಸೂಚನೆ ಇರುವ ಹಿನ್ನಲೆಯಲ್ಲಿ ಈ ಎಲ್ಲಾ ಕುಟಿಂಬವನ್ನು ಗಂಜಿ ಕೇಂದ್ರ ಇಲ್ಲವೇ ಸಂಬಂಧಿಕರ ಮನೆಗೆ ತೆರಳುವಂತೆ ಸೂಚಿಸಲಾಗಿದ್ದು,ನೆರೆಯ ಅಪಾಯವನ್ನು ಎದುರಿಸಲು ತಾಲೂಕಾಡಳಿತ ಸನ್ನದ್ದವಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಹೈ ಅಲರ್ಟ್:
ನೇತ್ರಾವತಿ ಅಪಾಯದ ಮಟ್ಟವನ್ನು ಮೀರಿ ಹರಿಯುವ ಹಿನ್ನಲೆಯಲ್ಲಿ ಬಂಟ್ವಾಳದಲ್ಲಿ ತಾಲೂಕಾಡಳಿತ ಹೈ ಅಲರ್ಟ್ ನಲ್ಲಿದೆ. ತಹಶೀಲ್ದಾರ್ ಪುರಂದರ ಹೆಗ್ಡೆ  ನೇತೃತ್ವದ ಕಂದಾಯಾಧಿಕಾರಿಗಳಾದ ರಾಮ ಕಾಟಿಪಳ್ಳ ,ಕಂದಾಯ ನಿರೀಕ್ಷಕ ಶಿವ ನಾಯ್ಕ್, ಸಿಬಂದಿ ಸದಾಶಿವ ಕೈಕಂಬ ಸುಂದರ, ಶೀತಲ್ ಶಿವ ಪ್ರಸಾದ್, ಯಶೋಧಾ, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಕೃತಿ ವಿಕೋಪ ಅಧಿಕಾರಿ ವಿಷು ಕುಮಾರ್,ಪುರಸಭಾ ಮುಖ್ಯಾಧಿಕಾರಿ ರೇಖಾ.ಜೆ.ಶೆಟ್ಟಿ, ಸಮುದಾಯ ಸಂಘಟನೆಯ ಅಧಿಕಾರಿ ಮತ್ತಡಿ ಮೊದಲಾದವರನ್ನೊಳಗೊಂಡ ತಂಡ ಬೆಳಿಗ್ಗಿನಿಂದಲೇ ನೆರೆ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೆಯೇ ಬಂಟ್ವಾಳ ಅಗ್ನಿಶಾಮಕ ದಳ,ಪೊಲೀಸ್ ಇಲಾಖೆಕೂಡ ಮುನ್ನಚ್ಚರಿಕಾ ಕ್ರಮದಲ್ಲಿ ನಿರತವಾಗಿದೆ.

ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ: 
ಎಂದಿನಂತೆಯೇ ಸಮೀಪದ ಶಾಲೆಗಳಿಗೆ ಹೊರಟ ಮಕ್ಕಳು ಮೆಟ್ಟಿಲಿಳಿಯುವ ಹೊತ್ತಿನಲ್ಲಿ ಭಾರೀ ಮಳೆ ಎದುರಾಗಿದೆ. ಇದೇ ಸಂದರ್ಭದಲ್ಲಿ ನೆರೆಯು ಏರಿಕೆಯಾಗುತ್ತಿದ್ದಂತೆ ಮುಂಜಾಗೃತ ಕ್ರಮವಾಗಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಗುರುವಾರ ತಹಶೀಲ್ದಾರ್ ಪುರಂದರ ಹೆಗ್ಡೆ ರಜೆ ಘೋಷಿಸಿದ್ದಾರೆ. 

ಡಿಸಿ-ಶಾಸಕ ಭೇಟಿ:
ನೆರೆ ಪೀಡಿತ ಸ್ಥಳಗಳಿಗೆ ಗುರುವಾರದಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್, ಶಾಸಕ ಯು.ರಾಜೇಶ್ ನಾಯ್ಕ್ , ಮಾಜಿ ಸಚಿವ ರಮಾನಾಥ ರೈ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರಲ್ಲದೆ, ಯಾವುದೇ ಅಪಾಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ತಾಲೂಕಾಡಳಿತಕ್ಕೆ ಸೂಚಿಸಿದ್ದಾರೆ.

ವಿದ್ಯುತ್ ಗೋಪುರಕ್ಕೆ ಹಾನಿ
ನೇತ್ರಾವತಿ ನದಿಯಲ್ಲಿ ಭಾರಿ ಪ್ರವಾಹದಿಂದ ಬಿ.ಸಿ.ರೋಡ್ ತಲಪಾಡಿಯ 110 ಕೆವಿ ವಿದ್ಯುತ್ ಸಬ್ ಸ್ಟೇಶನ್‍ನ ಹಿಂದೆ ಇರುವ ಎರಡು ವಿದ್ಯುತ್ ಗೋಪುರ, 8 ಕಂಬಗಳು ಕುಸಿದಿದ್ದು,50 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಜೀಪಮುನ್ನೂರು, ಸಜೀಪಮೂಡ, ಸಜೀಪನಡು, ಚೇಳೂರು, ಅಮ್ಟೂರು, ಗೋಳ್ತಮಜಲು, ಬಾಳ್ತಿಲ, ಬೋಳಂತೂರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗೋಪುರವು ನೇತ್ರಾವತಿ ನದಿಯಲ್ಲಿ ಪ್ರವಾಹ ಬಂದ ಕಾರಣ ಕುಸಿದಿದೆ. ಈ ಗ್ರಾಮಗಳಿಗೆ ಸುತ್ತುಬಳಸಿ ಪರ್ಯಾಯ ವಿದ್ಯುತ್ ಲೈನ್ ಮೂಲಕ ಸಂಪರ್ಕ ಕಲ್ಪಿಸಲಾಗಿದ್ದು ಹೊಸ ಗೋಪುರ ಅಳವಡಿಕೆವರೆಗೆ ಗ್ರಾಹಕರು ಸಂಪರ್ಕಿಸಬೇಕು ಎಂದು ಎಇಇ ನಾರಾಯಣ ಭಟ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News