ದೇವಸ್ಥಾನದಲ್ಲಿ ಅರ್ಚಕರ ಕೊಲೆ: ಪೊಲೀಸರಿಗೆ ಗಡುವು ನೀಡಿದ ಆದಿತ್ಯನಾಥ್

Update: 2018-08-16 15:23 GMT

ಲಕ್ನೊ, ಆ.16: ರವಿವಾರ ಬೆಳಿಗ್ಗೆ ಉತ್ತರ ಪ್ರದೇಶದ ಔರೆಯ ಜಿಲ್ಲೆಯಲ್ಲಿರುವ ದೇವಸ್ಥಾನವೊಂದರಲ್ಲಿ ಇಬ್ಬರು ಅರ್ಚಕರನ್ನು ಹತ್ಯೆಗೈದು ಓರ್ವನನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಕೊಲೆಗಾರರನ್ನು ಪತ್ತೆ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸರಿಗೆ ಗಡುವು ನಿಗದಿಪಡಿಸಿದ್ದಾರೆ. ಸಂಬಂಧಿತ ಪೊಲೀಸ್ ಠಾಣೆಯ ಅಧಿಕಾರಿಯನ್ನು ಅಮಾನತುಗೊಳಿಸಿರುವ ಆದಿತ್ಯನಾಥ್ ಈ ಪ್ರಕರಣದಲ್ಲಿ ಕೊಲೆಗಾರರ ಪತ್ತೆಗೆ ಪೊಲೀಸರಿಗೆ ಶನಿವಾರದ ವರೆಗಿನ ಸಮಯ ನೀಡಿದ್ದಾರೆ.

ಅರ್ಚಕರನ್ನು ಹಾಸಿಗೆಗೆ ಕಟ್ಟಿ ಹಾಕಿದ ಅಪರಿಚಿತ ದುಷ್ಕರ್ಮಿಗಳು ಅವರನ್ನು ಅನೇಕ ಬಾರಿ ಚೂರಯಿಂದ ಇರಿದು ಹತ್ಯೆ ಮಾಡಿದ್ದಾರೆ. ಘಟನೆಯಿಂದ ಈಗಲೂ ಔರೆಯ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ. ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಾಧುಗಳು ಅಕ್ರಮ ಗೋಸಾಗಟದ ವಿರುದ್ಧ ಅಭಿಯಾನ ನಡೆಸುತ್ತಿದ್ದ ಕಾರಣ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಹಿಂಸೆಗೆ ಮುಂದಾದ ಕಾರಣ ಪೊಲೀಸರು ಅಶ್ರುವಾಯು ಸಿಂಪಡಿಸಿ ಗುಂಪನ್ನು ಚದುರಿಸಬೇಕಾಗಿ ಬಂದಿತ್ತು. ಚೂರಿಯಿರಿತದಿಂದ ಗಾಯಗೊಂಡಿರುವ ಓರ್ವ ಅರ್ಚಕ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣವನ್ನು ಕೂಲಂಕುಷ ತನಿಖೆಯ ನಂತರವೇ ತಿಳಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಚಂದ್ರ ತಿಳಿಸಿದ್ದಾರೆ.

ಸಾಧುಗಳಾದ ಲಜ್ಜಾ ರಾಮ್ (65), ಹಲ್ಕೆ ರಾಮ್ (53) ಹಾಗೂ ರಾಮಶರಣ್ (56) ಮೇಲೆ ರವಿವಾರ ಕುದರ್ಕೋಟ್‌ನ ಭಯಾನಕ ನಾಥ ದೇವಸ್ಥಾನದಲ್ಲಿ ಆಗಂತುಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಸಾಧುಗಳನ್ನು ಹಾಸಿಗೆಗೆ ಕಟ್ಟಿ ಹಾಕಿದ ದುಷ್ಕರ್ಮಿಗಳು ಚೂರಿಯಿಂದ ಹಲವು ಬಾರಿ ಇರಿದ ಪರಿಣಾಮ ಲಜ್ಜಾ ರಾಮ್ ಮತ್ತು ಹಲ್ಕೆ ರಾಮ್ ಸ್ಥಳದಲ್ಲೇ ಮೃತಪಟ್ಟಿದ್ದರು. ರಾಮಶರಣ್ ಗಂಭೀರ ಗಾಯಗಳೊಂದಿಗೆ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದರು. ಅವರನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News