ಉಡುಪಿಗೆ ಆರು ಬಾರಿ ಆಗಮಿಸಿದ್ದ ವಾಜಪೇಯಿ

Update: 2018-08-16 16:07 GMT

ಉಡುಪಿ, ಆ.16: ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಸುಧೀರ್ಘ ಅನಾರೋಗ್ಯದ ಬಳಿಕ ಇಂದು ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಜೀವಿತಾವಧಿಯಲ್ಲಿ ಒಟ್ಟು ಆರು ಬಾರಿ ಭೇಟಿ ನೀಡಿದ್ದಾರೆ.

ವಾಜಪೇಯಿ ಅವರು ಭಾರತೀಯ ಜನಸಂಘದ (ಬಿಜೆಪಿಯ ಹಿಂದಿನ ಹೆಸರು) ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ 1968ರಲ್ಲಿ ಹೊಸದಿಲ್ಲಿ ಹಾಗೂ ಉಡುಪಿ ನಗರಸಭೆಗಳಲ್ಲಿ ಜನಸಂಘ ದೇಶದಲ್ಲೇ ಮೊದಲ ಬಾರಿಗೆ ಬಹುಮತ ದೊಂದಿಗೆ ಆಡಳಿತಕ್ಕೇರಿತ್ತು. ಉಡುಪಿ ನಗರಸಭೆ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ಬಹುಮತ ಪಡೆದ ಜನಸಂಘದಿಂದ ಡಾ.ವಿ.ಎಸ್.ಆಚಾರ್ಯ ಅಧ್ಯಕ್ಷರಾಗಿ ಆಯ್ಕೆಯಾದಾಗ ವಾಜಪೇಯಿ ಅವರನ್ನು ಅಭಿನಂದಿಸಿ ದೂರವಾಣಿ ಕರೆ ಮಾಡಿದ್ದರು ಎಂದು ಅಂದು ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಹಿರಿಯರಾದ ಎಂ.ಸೋಮಶೇಖರ್ ಭಟ್ ಅವರು ನೆನಪು ಮಾಡಿಕೊಂಡರು.

ಮುಂದೆ ಭಾರತದಲ್ಲೇ ಮೊದಲನೇಯದಾಗಿ 1968ರಲ್ಲಿ ಉಡುಪಿ ನಗರಸಭೆ ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದಾಗಲೂ ವಾಜಪೇಯಿ, ಡಾ.ಆಚಾರ್ಯರನ್ನು ಅಭಿನಂದಿಸಿದ್ದು ಮಾತ್ರವಲ್ಲದೇ, ಅದೇ ವರ್ಷ ಉಡುಪಿ ರಥಬೀದಿಯ ಪೇಜಾವರ ಮಠದ ಎದುರು ನಗರಸಭೆ ವತಿಯಿಂದ ನಡೆದ ವಿಶೇಷ ಸಮಾರಂಭದಲ್ಲಿ ಜನಸಂಘದ ಅಧ್ಯಕ್ಷನ ನೆಲೆಯಲ್ಲಿ ಭಾಗವಹಿಸಿದ್ದರು ಎಂದು ಆಗ ವಿದ್ಯಾರ್ಥಿಯಾಗಿದ್ದು ಮುಂದೆ ನಗರ ಸಭೆಯ ಅಧ್ಯಕ್ಷರೂ ಆದ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಗುಜ್ಜಾಡಿ ಪ್ರಭಾಕರ ನಾಯಕ್ ನೆನಪಿಸಿಕೊಂಡರು.

1975ರಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿ ವಿರೋಧ ಪಕ್ಷದ ನಾಯಕರನ್ನು ಜೈಲಿಗಟ್ಟಿದಾಗ ತಾನು ಅಟಲ್‌ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾನಿ ಮುಂತಾದವರೊಂದಿಗೆ ಬೆಂಗಳೂರಿನ ಜೈಲಿನಲ್ಲಿ ಕೆಲವು ದಿನ ಇದ್ದಿದ್ದನ್ನು ಸೋಮಶೇಖರ ಭಟ್ ಅವರು ಅಭಿಮಾನದಿಂದ ಸ್ಮರಿಸಿಕೊಂಡರು.

1977ರಲ್ಲಿ ತುರ್ತು ಪರಿಸ್ಥಿತಿಯನ್ನು ವಾಪಾಸು ಪಡೆದು ಲೋಕಸಭಾ ಚುನಾವಣೆ ನಡೆದಾಗ ಪಕ್ಷದ ಹಿರಿಯ ನಾಯಕರಾಗಿದ್ದ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಕೆ.ಎಸ್.ಹೆಗ್ಡೆ ಅವರ ಪರವಾಗಿ ಪ್ರಚಾರ ಭಾಷಣ ಮಾಡಲು ಸಹ ವಾಜಪೇಯಿ ಅವರು ಉಡುಪಿಗೆ ಆಗಮಿಸಿದ್ದರು. ನಾನೂ ಆ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂದು ಗುಜ್ಜಾಡಿ ತಿಳಿಸಿದರು.

ವಾಜಪೇಯಿ ಅವರು ಮೂರನೇ ಬಾರಿಗೆ ಉಡುಪಿಗೆ ಬಂದಿದ್ದು 1984ರಲ್ಲಿ. ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಾಗಿ ನಡೆದ ಚುನಾವಣೆಯಲ್ಲಿ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ತನ್ನ ಹಾಗೂ ಸಂಸತ್ ಚುನಾವಣೆಗೆ ಅಭ್ಯರ್ಥಿಯಾಗಿದ್ದ ಕರಂಬಳ್ಳಿ ಸಂಜೀವ ಶೆಟ್ಟಿ ಪರವಾಗಿ ಚುನಾವಣಾ ಪ್ರಚಾರ ಮಾಡಲು ವಾಜಪೇಯಿ ಬಂದು ನಗರಸಭೆ ಎದುರಿನ ವಿಕ್ಟೋರಿಯಾ ಜುಬಿಲಿ ಹಾಲ್ ಎದುರು ಆಯೋಜಿಸಿದ ಸಭೆಯಲ್ಲಿ ಮಾತನಾಡಿದ್ದರು ಎಂದು ಆಗ ನಗರಸಭೆಯ ಅಧ್ಯಕ್ಷರಾಗಿದ್ದ ಸೋಮಶೇಖರ್ ಭಟ್ ನುಡಿದರು.

ಈ ಚುನಾವಣೆಯಲ್ಲಿ ನಾವಿಬ್ಬರೂ ಸೋತರೂ ಸಹ ಮೊದಲ ಬಾರಿ ಇಬ್ಬರೂ ಠೇವಣಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆವು. ಇದು ವಾಜಪೇಯಿ ಅವರ ಭಾಷಣದ ‘ಪ್ರಭಾವ’ದಿಂದಲೇ ಎಂದು ಭಟ್ ತಿಳಿಸಿದರು.

ವಾಜಪೇಯಿ ಮುಂದೆ ಉಡುಪಿಗೆ ಬಂದಿದ್ದು 1993ರಲ್ಲಿ. ಆಗ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು ಹಿಂದಿರುಗುವ ಸಂದರ್ಭದಲ್ಲಿ ಉಡುಪಿಗೆ ಬಂದಿದ್ದಾಗ, ನಗರಸಭೆಯ ಎದುರು ಅವರನ್ನು ಸ್ವಾಗತಿಸಿ, ಅವರಿಗೆ ವಿಶಿಷ್ಟ ಸ್ಮರಣಿಕೆ ನೀಡಿ ಗೌರವಿಸಿದ್ದೆವು ಎಂದು ಆಗ ನಗರಸಭೆ ಅಧ್ಯಕ್ಷರಾಗಿದ್ದ ಗುಜ್ಜಾಡಿ ಪ್ರಭಾಕರ ನಾಯಕ್ ತಿಳಿಸಿದರು.

1998ರಲ್ಲಿ ವಾಜಪೇಯಿ ಐದನೇ ಬಾರಿಗೆ ಉಡುಪಿಗೆ ಆಗಮಿಸಿ, ಆಗ ಸಂಸತ್ ಚುನಾವಣೆಗೆ ನಿಂತಿದ್ದ ಐ.ಎಂ.ಜಯರಾಂ ಶೆಟ್ಟಿ ಅವರ ಪರವಾಗಿ ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ವಾಜಪೇಯಿ ಅವರ ಭಾಷಣವನ್ನು ಆಲಿಸಲು ಭಾರೀ ಸಂಖ್ಯೆಯ ಜನ ಸೇರಿದ್ದರು ಎಂದು ಗುಜ್ಜಾಡಿ ನೆನಪು ಮಾಡಿಕೊಂಡರು. ಈ ನಡುವೆ ವಾಜಪೇಯಿ 1993ರಲ್ಲಿ ಆಗ ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದ ಮಂಗಳೂರಿನ ಗುರುಪುರ-ಕೈಕಂಬದಲ್ಲಿ ಧನಂಜಯ ಕುಮಾರ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಅವರು ಕೊನೆಯ ಬಾರಿ ಉಡುಪಿಗೆ ಬಂದಿದ್ದು 2001ರಲ್ಲಿ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯದ ಸಂದರ್ಭದಲ್ಲಿ. ಆಗ ಪೇಜಾವರಶ್ರೀಗಳು ನಿರ್ಮಿಸಿದ ರಾಜಾಂಗಣದ ಉದ್ಘಾಟನೆಗೆ ಅವರು ಆಗಮಿಸಿದ್ದರು. 2001ರ ಜ.18ರಂದು ಆಗಮಿಸಿ ಪೇಜಾವರ ಶ್ರೀಗಳೊಂದಿಗೆ ಶ್ರೀಕೃಷ್ಣನ ದರ್ಶನ ಪಡೆದು,ಸಂಜೆ ರಾಜಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಪರ್ಯಾಯ ಪೇಜಾವರ ಮಠದ ವತಿಯಿಂದ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಗಿತ್ತು.

ಉಡುಪಿಯಲ್ಲಿ ವಾಜಪೇಯಿಯವರಿಗೆ ಹಲವು ಮಂದಿ ಆತ್ಮೀಯ ಸ್ನೇಹಿತರಿದ್ದರು. ಅವರಲ್ಲಿ ಡಾ.ವಿ.ಎಸ್.ಆಚಾರ್ಯ, ಸೋಮಶೇಖರ ಭಟ್, ಕರಂಬಳ್ಳಿ ಸಂಜೀವ ಶೆಟ್ಟಿ ಮುಂತಾದವರು ಸೇರಿದ್ದಾರೆ. ಡಾ.ಆಚಾರ್ಯರು ವಾಜಪೇಯಿ ಹಾಗೂ ಅಡ್ವಾನಿ ಅವರ ಒಡನಾಟವನ್ನು ಆಗಾಗ ಸ್ಮರಿಸಿಕೊಳ್ಳುತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News