​ಏಕಾಏಕಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ವಿರೋಧ

Update: 2018-08-16 17:50 GMT

ಬ್ರಹ್ಮಾವರ, ಆ.16: ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಮುಂದಾದ ಬಗ್ಗೆ ರಾಷ್ಟ್ರೀಯ ಹೆದ್ದಾರಿ-66ರ ಗುತ್ತಿಗೆ ಕಂಪೆನಿ ಹೈದರಾಬಾದ್ ಮೂಲದ ನವಯುಗ ಕಂಪೆನಿ ವಿರುದ್ದ ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿ, ಸ್ಥಳೀಯರು ಹಾಗೂ ಸಾರ್ವಜನಿಕರನ್ನು ಸೇರಿಸಿ ಇಂದು ಬೆಳಗ್ಗೆ ತೀವ್ರ ಪ್ರತಿಭಟನೆ ನಡೆಸಿತು.

ಸಾರ್ವಜನಿಕರಿಗೆ ಯಾವುದೇ ಪೂರ್ವ ಸೂಚನೆಯನ್ನೂ ನೀಡದೆ ಗುತ್ತಿಗೆ ಕಂಪೆನಿ ಇಂದು ಬೆಳಗಿನಿಂದಲೇ ಏಕಾಏಕಿಯಾಗಿ ಟೋಲ್ ಸಂಗ್ರಹಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ಬೆಳಗ್ಗೆ 10ಗಂಟೆಗೆ ಸಮಿತಿ ಸ್ಥಳೀಯ ರೊಂದಿಗೆ ಸೇರಿ ಪ್ರತಿಭಟನೆಗೆ ಮುಂದಾಯಿತು.

‘ಹಣಕ್ಕಾಗಿ ಕಂಪೆನಿ ಕಳ್ಳದಾರಿ ಹಿಡಿದಿರುವುದು ಖಂಡನೀಯ. ಇನ್ನೂ ಕೆಲವೆಡೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ಪೂರ್ಣಗೊಳ್ಳದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುವುದು ಸರಿಯಲ್ಲ. ಸ್ಥಳೀಯರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿ ಎಲ್ಲರ ಸಹಮತದೊಂದಿಗೆ ಮುಂದಿನ ಕ್ರಮಕೈಗೊಳ್ಳಲಿ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಇದೇ ವೇಳೆ ಪ್ರತಿಭಟನಕಾರರು ಗುತ್ತಿಗೆಯ ನವಯುಗ ಕಂಪೆನಿ ವಿರುದ್ಧ ಘೋಷಣೆ ಕೂಗಿದರು ಮಾತ್ರವಲ್ಲ ಕೆಲವರು ಜನಪ್ರತಿನಿಧಿಗಳ ವಿರುದ್ಧವೂ ಘೋಷಣೆ ಕೂಗಿದರು.

ಬ್ರಹ್ಮಾವರ ತಹಶೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಮನ ಒಲಿಸಲು ಪ್ರಯತ್ನಿಸಿದರು. ಸಾರ್ವಜನಿಕರು ಜಗ್ಗದಿದ್ದಾಗ ಸ್ಥಳಕ್ಕಾಗಮಿಸಿದ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ.ಭೂಬಾಲನ್, ಶುಕ್ರವಾರ ಸಂಜೆ ಡಿಸಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಸಮಿತಿಯ ಮುಖಂಡರು ಭಾಗವಹಿಸಿ ಚರ್ಚಿಸುವಂತೆ ತಿಳಿಸಿದರು.ಅದುವರೆಗೆ ಟೋಲ್ ಸಂಗ್ರಹ ನಡೆಯಲಿ ಎಂದರು. ಇದಕ್ಕೆ ಒಪ್ಪದ ಪ್ರತಿಭಟನಾ ನಿರತರು ಸಭೆಯವರೆಗೆ ಯಥಾಸ್ಥಿತಿ ಮುಂದುವರೆಯಲಿ. ಜಿಲ್ಲಾಧಿಕಾರಿ ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿ. ಅಲ್ಲಿಯ ತನಕ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸಬಾರದು ಎಂದು ಪಟ್ಟು ಹಿಡಿದರು.

ಪ್ರತಿಭಟನಾಕಾರರು ತಮ್ಮ ನಿರ್ಧಾರದಲ್ಲಿ ಅಚಲತೆಯನ್ನು ತೋರಿದಾಗ, ಎಸಿ ಅವರು ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ನಾಳೆ ನಡೆಯುವ ಡಿಸಿ ಸಭೆಯವರೆಗೂ ಸ್ಥಳೀಯ ವಾಹನಗಳಿಂದ (ಕೆಎ 20) ಟೋಲ್ ಸಂಗ್ರಹಿಸಬಾರದು ಎಂದು ಗುತ್ತಿಗೆ ಕಂಪೆನಿಗೆ ಆದೇಶ ನೀಡಿದರು. ಎಸಿ ನೀಡಿದ ಭರವಸೆ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಇದೇ ವೇಳೆ ಸ್ಥಳಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ನೀಡಿದ್ದು ಸ್ಥಳೀಯರ ಸಮಸ್ಯೆ ಆಲಿಸಿ ಅಧಿಕಾರಿಗಳ ಜೊತೆ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿದ್ದು, ವಿಷಯ ಅಲ್ಲಿಂದಲೇ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ ಐರೋಡಿ, ಆಲ್ವಿನ್ ಅಂದ್ರಾದೆ, ತಾಪಂ ಸದಸ್ಯೆ ಜ್ಯೋತಿ, ಐರೋಡಿ ಗ್ರಾಪಂ ಅಧ್ಯಕ್ಷೆ ಮೋಸೆಸ್ ರೋಡ್ರಿಗಸ್, ಪಾಂಡೇಶ್ವರ ಗ್ರಾಪಂ ಅಧ್ಯಕ್ಷ ಗೋವಿಂದ ಪೂಜಾರಿ, ಮಹೇಶ್ ಕುಮಾರ್ ಕುಂದಾಪುರ, ಪ್ರಕಾಶ ಶೆಟ್ಟಿ ತೆಕ್ಕಟ್ಟೆ, ರಾಜೇಂದ್ರ ಸುವರ್ಣ, ಬೋಜ ಪೂಜಾರಿ ಅಲ್ಲದೇ ವಿವಿಧ ಸಂಘಟನೆಯ ಮುಖಂಡರುಗಳು ಸೇರಿ ಮುನ್ನೂರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಮಗಾರಿ ಮುಗಿಯದೇ ಟೋಲ್ ಸಂಗ್ರಹ
ಸುರತ್ಕಲ್-ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು ನವಯುಗ ಕಂಪೆನಿ ಗುತ್ತಿಗೆ ಪಡೆದಿದ್ದು ಅನೇಕ ಕಡೆಗಳಲ್ಲಿ ಕಾಮಗಾರಿ ಇನ್ನೂ ಬಾಕಿ ಉಳಿದಿದೆ. ಇದರಿಂದ ಪ್ರತಿದಿನ ಅಲ್ಲಲ್ಲಿ ಅವಘಡಗಳಿಗೆ ಕಾರಣವಾಗಿ ವಾಹನ ಸವಾರರು ಹಾಗೂ ನಿತ್ಯ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಉಡುಪಿ ಕರಾವಳಿ ಜಂಕ್ಷನ್, ಕುಂದಾಪುರ ಶಾಸ್ತ್ರಿ ಸರ್ಕಲ್ ಭಾಗದಲ್ಲಿ ಇನ್ನೂ ಫ್ಲೈ ಓವರ್ ಕಾಮಗಾರಿ ಮುಗಿದಿಲ್ಲ. ಕಳೆದ ಹತ್ತು ವರ್ಷದಿಂದ ಈ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ಮುಗಿಯದೇ ಟೋಲ್ ಸಂಗ್ರಹಕ್ಕೆ ಕಂಪೆನಿ ಮುಂದಾಗಿರುವುದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ಲಾ ವಾಹನಗಳಿಗೂ ಟೋಲ್ ಸಂಗ್ರಹ ಮಾಡಲು ಅವಕಾಶ ಬೇಕೆಂದು ನವಯುಗ ಕಂಪೆನಿ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದು, ಇದನ್ನು ಪುರಸ್ಕರಿಸಿದ ಅವರು ಸ್ಥಳೀಯ ವಾಹನ ಸೇರಿದಂತೆ ಎಲ್ಲಾ ವಾಹನ ಗಳಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಅದರಂತೆ ಕಂಪೆನಿ ಪೊಲೀಸ್ ಭದ್ರತೆಯಲ್ಲಿ ೋಲ್ ಸಂಗ್ರಹಕ್ಕೆ ಮುಂದಾಗಿತ್ತು.

ಬಿಗು ಪೊಲೀಸ್ ಭದ್ರತೆ
ಟೋಲ್ ಸಂಗ್ರಹಕ್ಕೆ ಮುಂದಾದರೆ ಪ್ರತಿಭಟನೆ ನಡೆಯುವ ಸಾಧ್ಯತೆಗಳನ್ನು ಅರಿತಿದ್ದ ಜಿಲ್ಲಾಡಳಿತ, ಸಾಸ್ತಾನ ಟೋಲ್ ಫ್ಲಾಜಾ ಸಮೀಪ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಉಡುಪಿ ಉಪವಿಭಾಗದ ಡಿವೈಎಸ್ಪಿ ಕುಮಾರಸ್ವಾಮಿ, ಬ್ರಹ್ಮಾವರ ಸಿಪಿಐ ಶ್ರೀಕಾಂತ್, ವಿವಿಧ ಠಾಣೆಗಳ ವೃತ್ತ ನಿರೀಕ್ಷಕರು, ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 50ಕ್ಕೂ ಅಧಿಕ ಸಿಬ್ಬಂದಿಗಳು ಬಂದೋಬಸ್ತಿನಲ್ಲಿದ್ದರು. ಸ್ಥಳದಲ್ಲಿ ಕೆಎಸ್‌ಆರ್‌ಪಿ ಹಾಗೂ ಡಿಎಆರ್ ವಾಹನವನ್ನು ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News