ಬೆಳ್ತಂಗಡಿ; ಉಕ್ಕಿ ಹರಿಯುತ್ತಿರುವ ನದಿಗಳು: ಜನಸಂಚಾರ ಅಸ್ತವ್ಯಸ್ತ

Update: 2018-08-16 18:26 GMT

ಬೆಳ್ತಂಗಡಿ,ಆ.16: ನಿರತಂತ ಮಳೆಯಿಂದ ನದಿ, ಹಳ್ಳ, ತೊರೆಗಳು ತುಂಬಿ ಹರಿಯುತ್ತಿದ್ದು  ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಸುಮಾರು ಐದಕ್ಕೂ ಹೆಚ್ಚು ಮನೆಗಳು ಕುಸಿದಿದ್ದು ಹತ್ತಾರು ಮನೆಗಳು ಜಲಾವೃತಗೊಂಡಿದೆ. ತಾಲೂಕಿನ ವಿವಿದೆಡೆಗಳಲ್ಲಿ ಧರೆ ಕುಸಿತಗಳು ಸಂಭವಿಸಿದ್ದು ಕೃಷಿ ಜಮೀನುಗಳು ಜಲಾವೃತ್ತಗೊಂಡಿದೆ. ನೂರಾರು ಎಕ್ರೆ ಕೃಷಿಗೆ ಹಾನಿಯಾಗಿದ್ದು ಬಹುತೇಕ ಪ್ರದೇಶಗಳಿಗೆ ನೀರು ನುಗ್ಗಿದೆ. ಅಪಾರಪ್ರಮಾಣದಲ್ಲಿ ನಷ್ಟಗಳು ಸಂಭವಿಸಿದೆ. ಮಳೆಯೊಂದಿಗೆ ಗಾಳಿ ಅಬ್ಬರಕ್ಕೆ ವಿದ್ಯುತ್ ಕಂಬಗಳು, ಮರಗಳು ಧರೆಗುಳಿದ ಕಾರಣ ಹಾನಿಗಳು ಸಂಭವಿಸಿದೆ. ಸಂಜೆಯ ವೇಳೆಗೆ ಮಳೆಯ ಅಬ್ಬರ ಕಡಿಮೆಯಾಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. 

ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಬಾರೀ ಮಳೆಗೆ ನೇತ್ರಾವತಿ, ಕಪಿಲಾ, ಅಣಿಯೂರು ಹಳ್ಳ, ಮೃತ್ಯುಂಜಯ, ಸೋಮಾವತಿ ಸೇರಿದಂತೆ ಎಲ್ಲ ನದಿಗಳು ಗುರುವಾರವೂ ತುಂಬಿ ಹರಿಯುತ್ತಿದ್ದು ತಾಲೂಕಿನ ಗ್ರಾಮೀಣ ಪ್ರದೇಶಗಳು ಜಲಾವೃತಗೊಂಡಿದೆ. ತೋಟಗಳಿಗೆ ಹಾಗೂ ಗದ್ದೆಗಳಿಗೆ ನೀರು ನುಗ್ಗಿದ್ದು ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ನಗರಗಳಲ್ಲಿ ವಾಹನಗಳ ಹಾಗ ಜನಸಂಚಾರ ವಿರಳವಾಗಿತ್ತು.  ಶಾಲಾ ಕಾಲೇಜುಗಳಿಗೆ ರಜೆ ನೀಡದಿದ್ದರೂ ಮಕ್ಕಳು ಮಳೆಯ ಕಾರಣದಿಂದ ಶಾಲೆಗಳಿಗೆ ಹೋಗಲು ಹರಸಾಹಸ ಪಡಬೇಕಾಯಿತು ಇದರಿಂದಾಗಿ ಹಾಜರಾತಿ ಕಡಿಮೆಯಾಗಿತ್ತು. 

ಲಾೈಲ ಗ್ರಾಮದ ಪುತ್ರಬೈಲು, ಗುರಿಂಗಾನ, ಗಾಂಧಿನಗರದಲ್ಲಿ ಸೋಮಾವತಿ ನದಿ ತಟದಲ್ಲಿರುವ ಮನೆಗಳು ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿ ಮುಳುಗಡೆಯ ಭೀತಿಯನ್ನು ಎದುರಿಸುತ್ತಿದೆ. ಲಾಯಿಲದಿಂದ ಕಿಲ್ಲೂರಿಗೆ ಹೋಗುವ ರಸ್ತೆಯ ಬದಿಯ ವರೆಗೂ ನೀರಿನ ಮಟ್ಟ ಏರಿಕೆ ಆಗಿದೆ.

ಗಾಂಧಿನಗರದಲ್ಲಿ ಆರು ಮನೆಗಳು, ಗುರಿಂಗಾನದಲ್ಲಿ ಆರು ಮನೆಗಳು ಹಾಗೂ ಪುತ್ರಬೈಲಿನಲ್ಲಿ ಎರಡು ಮನೆಗಳು ಸೇರಿದಂತೆ ಈ ಭಾಗದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಗಳು ನೆರೆ ಭೀತಿಯನ್ನು ಎದುರಿಸುತ್ತಿದೆ. ಕೆಲವು ಮನೆಯವರನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ. ಕಳೆದ ತಿಂಗಳು ಕೂಡಾ ನೆರೆಯಿಂದ ಮನೆಯವರೆಗೂ ನೆರೆ ಬಂದಿತ್ತು. ಆ ಸಂದರ್ಭ ಈ ಕುಟುಂಬಗಳಿಗೆ ಮಂಜೂರಾದ ಮನೆ ನಿವೇಶನದಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದ್ದರೂ ತಾಲೂಕು ಆಡಳಿತ ಇನ್ನು ಕ್ರಮಕ್ಕೆ ಮುಂದಾಗಲಿಲ್ಲ. 

ಕೊಯ್ಯೂರು ಗ್ರಾಮದ ಕುರಿಯಾಲ ನಿವಾಸಿ ಬಾಬುಮೊಗೇರ ಎಂಬವರ ಮನೆ ಸಂಪುರ್ಣ ಕುಸಿದಿದ್ದು ಅಪಾರ ನಷ್ಟ ಸಂಭವಿದೆ ಮನೆಯಲ್ಲಿದ್ದ ಸುಕನ್ಯ ಹಾಗೂ ಓಬಯ್ಯ ಎಂಬವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರಿಪಳ್ಳದ ತೋಟವೊಂದಕ್ಕೆ ನೆರೆ ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ. ಕುದುರೆಮುಖ ರಾಷ್ಟ್ರೀಯ ನಡ ಗ್ರಾಮದ ಕಂಬುಜೆ ಎಂಬಲ್ಲಿ ರತ್ನ ಎಂಬವರ ಮನೆಗೆ ಭಾರೀ ಗಾತ್ರದ ಮರ ಬಿದ್ದು ಮನೆಗೆ ಭಾಗಶ ಹಾನಿಯಾಗಿದೆ. ಮೇಲಂತಬೆಟ್ಟು ನಿವಾಸಿ ಸಂದೀಪ ಎಂಬವರ ಮನೆಯ ಹಿಂಭಾಗದ ಗುಡ್ಡ ಕುಸಿದು ಹಾನಿಯಾಗಿದೆ. ಲಾಯಿಲ ಗ್ರಾಮದ ಗುಂರಿಗಾನ ಎಂಬಲ್ಲಿನ ನಿವಾಸಿ ಸೈಯ್ಯದ್ ಆಲಿ ಎಂಬವರ ಮನೆಯ ಹಿಂಬಿದಿಯ ಧರೆ ಕುಸಿತಗೊಂಡು ಹಾನಿಯಾಗಿದೆ. ಕಳಿಯ ಗ್ರಾಮದ ಕಲ್ಕುರ್ನಿ ಎಂಬಲ್ಲಿ  ಜಿನ್ನಪ್ಪಗೌಡ ಎಂಬರ ತೋಟದ ಬದಿಯಲ್ಲಿ ಗುಡ್ಡವೊಂದು ಕುಸಿದು ಬಿದ್ದಿದ್ದು ತೋಟಕ್ಕೆ ನೀರೂ ನುಗ್ಗಿದ್ದು ಭಾರೀ ಹಾನಿಯಾಗಿದೆ. ನೆರಿಯ ಗ್ರಾಮದಲ್ಲಿ ಹಾಗೂ ಚಾರ್ಮಾಡಿ ಗ್ರಾಮದಲ್ಲಿ ವಿವಿದೆಡೆಗಳಲ್ಲಿ ಭು ಕುಸಿತವಾಗಿದ್ದು ಭಾರೀ ಪ್ರಮಾಣದಲ್ಲಿ ಕೃಷಿ ಹಾನಿಯಾಗಿದೆ ನಷ್ಟವನ್ನು ಅಂದಾಜಿಸಲಾಗುತ್ತಿದೆ. ಲಾಯಿಲ ಗ್ರಾಮ ಪಂಚಾಯಿತಿಯ ಆವರಣ ಗೋಡೆ ಕುಸಿತವಾಗಿದ್ದು ನಷ್ಟ ಸಂಭವಿಸಿದೆ. 

ನಾರಾವಿ ಗ್ರಾಮದ ಬರಿಮಾರು ಎಂಬಲ್ಲಿ ಸುಮಾರು 15 ಕುಟುಂಬಗಳು ವಾಸಿಸುತ್ತಿರುವ ಪ್ರದೇಶದ ಸುತ್ತ ನೀರು ಆವರಿಸಿದ್ದು ಅಪಾಯಕಾರಿ ಸ್ಥಿತಿ ಎದುರಾಗಿತ್ತು. ಶಾಸಕರು, ತಹಶೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.  ನಾರಾವಿ ಪೇಟೆಯಲ್ಲಿ ಸದಾನಂದ ಕಿಣಿ ಎಂಬವರ ಎರಡು ಮಹಡಿಯ ನಿವಾಸದ ಮನೆ ಬಿರುಕು ಬಿಟ್ಟಿದ್ದು ಕುಸಿಯುವ ಹಂತದಲ್ಲಿದೆ. ವೇಣೂರು ಪೇಟೆಯಲ್ಲಿ ಸೇತುವೆ ಮೇಲೆ ನಿರು ಬಂದು ರಸ್ತೆಯಲ್ಲಿ ನೀರು ತುಂಬಿದ್ದು ಕೆಲ ಹೊತ್ತು ವೇಣೂರು ಮೂದಬಿದ್ರೆ ಸಂಚಾರ ವ್ಯವಸ್ಥೆ  ಸ್ಥಗಿತಗೊಂಡಿತ್ತು. ವೇಣೂರು ಗ್ರಾಮದ ನಿಟ್ಟೆಡೆ ಜಾನಮ್ಮ ಸಂಜಿವರ ಮನೆ , ನಿಟ್ಟಡೆ ಸುನಂದ ತಿಮ್ಮಯ್ಯ ಮೂಲ್ಯರ ಮನೆ, ಬಜಿರೆ ಗ್ರಾಮದ ಪ್ರಸಾದ್ ಹೆಗ್ಡೆ ಎಂಬವರ ಮನೆ ಗೊಡೆ ಕುಸಿದು ಹಾನಿಯಾಗಿದೆ. ಅಂಡಿಂಜೆ ಗ್ರಾಮದ ಬಾಬು ಆಚಾರ್ಯ ಎಂಬವರ ವಾಸ್ತವ್ಯದ ಮನೆ ಸಂಪೂರ್ಣ ಕುಸಿದಿದ್ದು ಮತ್ತು ಪಿಲ್ಯ ಗ್ರಾಮದ ಸುಜಯ್ ಸಂತೋಷ್ ಎಂಬವರ ಮನೆ ಸಂಪೂರ್ಣ ಕುಸಿದಿದೆ.

ರಜೆ ಗೊಂದಲ - ಪರದಾಡಿದ ವಿದ್ಯಾರ್ಥಿಗಳು
ಕಳೆದ 10ದಿನಗಳಿಂದ ತಾಲೂಕಿನಾಧ್ಯಂತ ಮಳೆ ಸುರಿಯುತ್ತಿದ್ದು ಆದರೆ ಗುರುವಾರ ಅತೀ ಹೆಚ್ಚು ಮಳೆ ಸುರಿದಿದ್ದು ತಾಲೂಕು ಆಡಳಿತ ರಜೆ ಘೋಷಿಸದೆ ಪೋಷಕರು ಹಾಗೂ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾದರು. ಕೆಲವು ಶಾಲೆಗಳಿಗೆ ಆಡಳಿತ ಮಂಡಳಿ ರಜೆ ನೀಡಿದ್ದು ಉಳಿದ ಬಹುತೇಕ ಶಾಲೆಗಳ ವಿದ್ಯಾರ್ಥಿಗಳು ಮಳೆಗೆ ಶಾಲೆಗೆ ಹೋಗುವಂತಾಯಿತು. ಕೆಲವು ಪ್ರದೇಶಗಳಲ್ಲಿ ರಸ್ತೆ ಸಂಚಾರ ಸಂಪೂರ್ಣ ಹದಗೆಟ್ಟಿದ್ದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲಾಗಲಿಲ್ಲ. ಕೆಲವೆಡೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ರಜೆ ನೀಡಲಯಿತು. ಮಕ್ಖಳು ಭಾರೀ ಮಳೆಯಲ್ಲಿ ಪೇಟೆಯಲ್ಲಿ ತಿರುಗಾಡಬೇಕಾಗಿ ಬಂತು. ಪದವಿಪೂರ್ವ ಕಾಲೇಜುಗಳಿಗೆ ಪರೀಕ್ಷೆಗಳು ನಿಗದಿಯಾಗಿತ್ತು ಆದರೆ ಮಳೆಯ ಕಾರಣದಿಂದಾಗಿ ಪರೀಕ್ಷೆಗಳನ್ನು ಮುಂದೂಡಲಾಯಿತು. 

ಬೆಂಗಳೂರಿಗೆ ಇಂದೂ ವಾಹನಸಂಚಾರ ಸ್ಥಗಿತ: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಬಂದ್ ಆಗಿದ್ದು ಚಾರ್ಮಾಡಿ ಘಾಟಿಯ ಮೂಲಕ ಮಾತ್ರ ವಾಹನ ಸಂಚಾರ ಸಾಧ್ಯವಾಗಿದೆ. ಸಾಮಾನ್ಯ ಬಸ್‍ಗಳ ಹೊರತಾಗಿ ಇತರೆ ರಾಜಹಂಸ, ಡಿಲೆಕ್ಸ್, ಸ್ಲೀಪರ್ ಸೇರಿದಂತೆ ಇತರೆ  ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News