ಅಮೆರಿಕದಲ್ಲಿ ಮತ್ತೊಬ್ಬ ಸಿಖ್ ವ್ಯಕ್ತಿಯ ಇರಿದು ಕೊಲೆ

Update: 2018-08-17 11:44 GMT

ನ್ಯೂಯಾರ್ಕ್, ಆ.17: ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಸಿಖ್ ವ್ಯಕ್ತಿಯೊಬ್ಬರನ್ನು ಅವರ ಅಂಗಡಿಯಲ್ಲೇ ಇರಿದು ಸಾಯಿಸಿರುವ ಘಟನೆ ನಡೆದಿದೆ. ಕಳೆದ ಮೂರು ವಾರಗಳಲ್ಲಿ ದೇಶದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಹತ್ಯೆ ಮಾಡಿದ ಮೂರನೇ ಘಟನೆ ಇದಾಗಿದೆ.

ತೆರ್‍ಲೋಕ್ ಸಿಂಗ್ ಅವರ ಮೃತದೇಹ ಅಂಗಡಿಯಲ್ಲಿ ಗುರುವಾರ ಪತ್ತೆಯಾಗಿದೆ ಎಂದು ಸೋದರ ಸಂಬಂಧಿ ಹೇಳಿದ್ದಾರೆ. ಅವರ ಎದೆ ಮೇಲೆ ಇರಿತದ ಗಾಯಗಳಿದ್ದವು. ಇದನ್ನು ಜನಾಂಗೀಯ ಹತ್ಯೆಯ ಪ್ರಕರಣ ಎಂದು ಎಸೆಕ್ಸ್ ಕೌಂಟಿ ತನಿಖಾಧಿಕಾರಿ ಹೇಳಿದ್ದಾಗಿ ಎಬಿಸಿ7ಎನ್‍ವೈ ವರದಿ ಮಾಡಿದೆ.

ಈ ಹತ್ಯೆಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ದಯಾಳುವಾಗಿದ್ದ ಸಿಂಗ್ ಅವರ ಪತ್ನಿ ಮತ್ತು ಮಕ್ಕಳು ಭಾರತದಲ್ಲಿ ವಾಸವಿದ್ದಾರೆ. ಕುಟುಂಬ ನಿರ್ವಹಿಸುವುದಕ್ಕಾಗಿ ಸಿಂಗ್ ಅಮೆರಿಕದಲ್ಲಿ ವ್ಯಾಪಾರ ನಡೆಸುತ್ತಿದ್ದರು. ಕಳೆದ ಆರು ವರ್ಷಗಳಿಂದ ವಹಿವಾಟು ನಡೆಸುತ್ತಿದ್ದ ಸಿಂಗ್‍ ಗೆ ಕೆಲಸದ ಸ್ಥಳದಲ್ಲಿ ಯಾವ ಭಯವೂ ಇದ್ದಿರಲಿಲ್ಲ ಎಂದು ನೆರೆಯವರು ಹೇಳಿದ್ದಾರೆ.

ಆಗಸ್ಟ್ 6ರಂದು ಕ್ಯಾಲಿಫೋರ್ನಿಯಾದ ಮಾಂಟೆಕಾದಲ್ಲಿ 71 ವರ್ಷದ ಸಾಹಿಬ್ ಸಿಂಗ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಅಂತೆಯೇ ಜುಲೈ 31ರಂದು 50 ವರ್ಷದ ಸುರ್ಜೀತ್ ಮಾಲ್ಹಿ ಎಂಬುವವರು ರಿಪಬ್ಲಿಕನ್ ಅಭ್ಯರ್ಥಿಯ ಪರ ಪ್ರಚಾರದ ಫಲಕ ಹಾಕುತ್ತಿದ್ದಾಗ ಹತ್ಯೆಗೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News