ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ ಕರೆ
ಉಡುಪಿ, ಆ.17: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರು ಸಾಕ್ಷಿಗಳಿಗೆ ಮೊಬೈಲ್ ಕರೆಯ ಮೂಲಕ ಬೆದರಿಕೆಯೊಡ್ಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಾಕ್ಷಿಗಳಾದ ಕಾರ್ಕಳ ತಾಲೂಕು ನಂದಳಿಕೆಯ ಅರುಣ್ ಕುಮಾರ್ (43) ಹಾಗೂ ಸತೀಶ ಪೂಜಾರಿ ಎಂಬವರು ಆ.16ರಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲು ಮುಗಿಸಿ ಮಧ್ಯಾಹ್ನ 1:38ರ ಸುಮಾರಿಗೆ ಅಲ್ಲೇ ಸಮೀಪದ ಪಂಚರತ್ನ ಹೋಟೆಲ್‌ಗೆ ಊಟ ಮಾಡಲು ತೆರಳಿದ್ದರು.
ಆ ಸಂದರ್ಭದಲ್ಲಿ ಅರುಣ್ ಕುಮಾರ್ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತ, ಸಾಕ್ಷಿ ಹೇಳಿದ ಕಾರಣಕ್ಕೆ ನಿನ್ನ ತಾಯಿ ಲೀಲಾವತಿ ಅವರನ್ನು 10 ನಿಮಿಷದೊಳಗೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು. ಈ ಕರೆಯನ್ನು ಅವರ ಜೊತೆಯಲ್ಲಿದ್ದ ಸತೀಶ್ ಪೂಜಾರಿ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.
ಬೆದರಿಕೆ ಕರೆ ಮಾಡಿದ ವ್ಯಕ್ತಿ ನಂತರ ಸತೀಶ್ ಪೂಜಾರಿಯ ಮೊಬೈಲ್‌ಗೂ ಕರೆ ಮಾಡಿದ್ದು, ಆದರೆ ಅವರು ಭಯಭೀತರಾಗಿ ಆ ಕರೆಯನ್ನು ಸ್ವೀಕರಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅರುಣ್ ಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇವರಿಬ್ಬರು ಕೊಲೆ ಪ್ರಕರಣದ ಆರೋಪಿ ನಂದಳಿಕೆಯ ನಿರಂಜನ್ ಭಟ್ ನೆರೆಮನೆಯವರಾಗಿದ್ದು, ಅರುಣ್ ಕುಮಾರ್, ನಿರಂಜನ್ ಭಟ್ ಮನೆಯಲ್ಲಿ ರಾತ್ರಿ ಹೆಣ ಸುಡುತ್ತಿದ್ದಾಗ ಹೊಗೆ ಹೋಗುತ್ತಿರುವುದನ್ನು ನೋಡಿ ಸಾಕ್ಷ್ಯ ನುಡಿದಿದ್ದಾರೆ. ಅದೇ ರೀತಿ ಸತೀಶ್ ಪೂಜಾರಿ, ನಿರಂಜನ್ ಭಟ್ ತನ್ನ ಬಳಿ ರಿವಾಲ್ವರ್ ಕೇಳಿರುವುದಾಗಿ ಸಾಕ್ಷ್ಯ ನುಡಿದಿದ್ದಾರೆ.
ಈ ಬೆದರಿಕೆಯ ಹಿನ್ನೆಲೆಯಲ್ಲಿ ಸಾಕ್ಷಿದಾರರು ಹಾಗೂ ಅವರ ಮನೆಗಳಿಗೆ ಭದ್ರತೆಯನ್ನು ಒದಗಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆ.16ರಂದು ಒಟ್ಟು ನಾಲ್ವರು ಸಾಕ್ಷಿಗಳು ಹೇಳಿಕೆ ನೀಡಿದ್ದು, ಈವರೆಗೆ ಈ ಪ್ರಕರಣದಲ್ಲಿ ಒಟ್ಟು 19 ಮಂದಿ ಸಾಕ್ಷಿ ನುಡಿ ದಿದ್ದಾರೆ. ಆ.18ರಂದು ನಾಲ್ಕು ಮಂದಿ ಸಾಕ್ಷ್ಯ ನುಡಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.