ಕೇರಳದಲ್ಲಿ ಮುಂದುವರಿದ ಮಹಾಮಳೆ: 324ಕ್ಕೇರಿದ ಸಾವಿನ ಸಂಖ್ಯೆ

Update: 2018-08-17 14:00 GMT

ತಿರುವನಂತಪುರ, ಆ, 17: ರಾಜ್ಯದಲ್ಲಿ ನೆರೆ ಪರಿಸ್ಥಿತಿ ಅಪಾಯಕಾರಿಯಾಗಿ ಮುಂದುವರಿದಿದೆ. ಪಂಪಾ, ಪೆರಿಯಾರ್, ಚಾಲಕ್ಕುಡಿಯಂತಹ ನದಿಗಳಲ್ಲಿ ನೀರು ತುಂಬಿ ಹರಿಯುವುದು ನಿಂತಿಲ್ಲ. ಆಲಪ್ಪುಳ, ಎರ್ನಾಕುಳಂ, ಪತ್ತನಂತಿಟ್ಟ ಹಾಗೂ ತ್ರಿಶೂರು ಹೆಚ್ಚು ಹಾನಿಗೀಡಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಆಗಸ್ಟ್ 8ರಿಂದ ಇಂದಿನ ವರೆಗೆ ರಾಜ್ಯದಲ್ಲಿ 324 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 1,568 ನೆರೆ ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದ್ದು, ಅಲ್ಲಿ 2,23,000 ಜನರು ಆಶ್ರಯ ಪಡೆದುಕೊಂಡಿದ್ದಾರೆ. ಆಹಾರ ಪ್ಯಾಕೇಟ್‌ಗಳ ತುರ್ತು ಅಗತ್ಯತೆ ಇದ್ದು, ಕೇಂದ್ರ ಸರಕಾರ 1 ಲಕ್ಷ ಆಹಾರ ಪ್ಯಾಕೇಟ್‌ಗಳನ್ನು ಪೂರೈಕೆ ಮಾಡಿದೆ ಎಂದು ಅವರು ತಿಳಿಸಿದರು.

ಹೆಚ್ಚು ಅಪಾಯಕಾರಿ ಪ್ರದೇಶದಲ್ಲಿ ಬಾಕಿ ಆಗಿರುವ ಜನರನ್ನು ಸ್ಥಳಾಂತರಿಸಲು ಪತ್ತನಂತಿಟ್ಟ ಜಿಲ್ಲಾಡಳಿತಕ್ಕೆ ಅಗತ್ಯದ ಸೂಚನೆ ನೀಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಈಗಲೂ ಕೆಲವು ಜನರು ಬಾಕಿ ಆಗಿದ್ದಾರೆ. ಅಲ್ಲಿಗೆ ದೋಣಿಯಲ್ಲಿ ಪ್ರಯಾಣಿಸಲೂ ಸಾಧ್ಯವಾಗುತ್ತಿಲ್ಲ. ಆದುದರಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು. ಕಟ್ಟಡವೊಂದರ ಟೆರೇಸ್ ಹಾಗೂ ಎರಡನೇ ಮಹಡಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ಇಂದು ಬೆಳಗ್ಗೆ 6 ಗಂಟೆಗೆ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ರಾಜ್ಯದಲ್ಲಿ ಇಂತಹ 14 ತಂಡಗಳು ಕಾರ್ಯಾಚರಿಸುತ್ತಿವೆ. ಹೆಚ್ಚುವರಿಯಾಗಿ ನೌಕಾಪಡೆಯ ತ್ರಿಶೂರ್‌ನಲ್ಲಿ 13 ತಂಡ, ವಯನಾಡ್‌ನಲ್ಲಿ 10 ತಂಡ, ಚೆಂಗನ್ನೂರ್‌ನಲ್ಲಿ 4 ತಂಡ, ಆಲ್ವೇಯಲ್ಲಿ 12 ತಂಡ, ಪತ್ತನಂತಿಟ್ಟದಲ್ಲಿ 3 ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅವರು ತಿಳಿಸಿದ್ದಾರೆ. ವಿವಿಧ ಕೇಂದ್ರಗಳಲ್ಲಿ ಕಾರ್ಯಾಚರಿಸಲು ತಟ ರಕ್ಷಣಾ ಪಡೆ 28 ತಂಡಗಳನ್ನು ಕಳುಹಿಸಿ ಕೊಟ್ಟಿದೆ. ಎರಡು ಹೆಲಿಕಾಪ್ಟರ್‌ಗಳನ್ನು ಕೂಡ ಅದು ಕಳುಹಿಸಿಕೊಟ್ಟಿದೆ. ನೌಕಾ ಪಡೆ ಮೂರು ಹೆಲಿಕಾಪ್ಟರ್‌ಗಳನ್ನು ಕೂಡ ಕಳುಹಿಸಿಕೊಟ್ಟಿದೆ. ಎನ್‌ಡಿಆರ್‌ಎಫ್ ಇದುವರೆಗೆ 39 ತಂಡಗಳನ್ನು ಕಳುಹಿಸಿ ಕೊಟ್ಟಿದೆ.

 ಈಗ ನಾವು ಹೆಚ್ಚುವರಿ 16 ಎನ್‌ಡಿಆರ್‌ಎಫ್‌ನ ತಂಡವನ್ನು ಕಳುಹಿಸಿಕೊಡುವಂತೆ ಕೇಂದ್ರವನ್ನು ಕೋರಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇಡುಕ್ಕಿ, ವಯನಾಡ್‌ನ ಹೆಚ್ಚಿನ ಪ್ರದೇಶಗಳು ಜಲಾವೃತವಾಗಿದೆ. ಈ ಎರಡು ಜಿಲ್ಲೆಗಳ ನಡುವೆ ಸಂವಹನ ಸಂಪರ್ಕ ಮರು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗುತ್ತಿದೆ. ಈ ಜಿಲ್ಲೆಗಳಲ್ಲಿ ಶೀಘ್ರದಲ್ಲಿ ರಸ್ತೆ ಸಂಪರ್ಕ ಮರು ಸ್ಥಾಪಿಸುವ ಭರವಸೆ ಇದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News