16.8 ಲಕ್ಷ ಹಜ್ ಯಾತ್ರಿಕರ ಆಗಮನ: ಪಾಸ್‌ಪೋರ್ಟ್ ಮಹಾನಿರ್ದೇಶನಾಲಯ ಘೋಷಣೆ

Update: 2018-08-17 14:24 GMT

ಜಿದ್ದಾ (ಸೌದಿ ಅರೇಬಿಯ), ಆ. 17: 16.8 ಲಕ್ಷಕ್ಕೂ ಅಧಿಕ ಹಜ್ ಯಾತ್ರಿಕರು ಗುರುವಾರ ಮಧ್ಯಾಹ್ನದ ವೇಳೆಗೆ ಸೌದಿ ಅರೇಬಿಯಕ್ಕೆ ಆಗಮಿಸಿದ್ದಾರೆ ಎಂದು ಪಾಸ್‌ಪೋರ್ಟ್ ಮಹಾನಿರ್ದೇಶನಾಲಯ ತಿಳಿಸಿದೆ.

‘‘ಈ ಕ್ಷಣದವರೆಗೆ ನಮ್ಮ ವಾಯು, ಭೂ ಮತ್ತು ಜಲ ತಪಾಸಣಾ ಠಾಣೆಗಳು ಜಗತ್ತಿನ ವಿವಿಧ ಭಾಗಗಳಿಂದ 16,84,629 ಯಾತ್ರಿಕರನ್ನು ಹಾರ್ದಿಕವಾಗಿ ಸ್ವಾಗತಿಸಿವೆ’’ ಎಂದು ಪಾಸ್‌ಪೋರ್ಟ್ಸ್ ಮಹಾ ನಿರ್ದೇಶಕ ಮೇಜರ್ ಜನರಲ್ ಸುಲೈಮಾನ್ ಬಿನ್ ಅಬ್ದುಲ್ ಅಝೀಝ್ ಅಲ್-ಯಾಹ್ಯಾ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

15,84,085 ಯಾತ್ರಿಕರು ವಿಮಾನದ ಮೂಲಕ ಬಂದಿದ್ದಾರೆ ಎಂದು ಯಾಹ್ಯಾ ಹೇಳಿದರು. 84,381 ಮಂದಿ ಭೂ ಗಡಿದಾಟುಗಳ ಮೂಲಕ ಬಂದರೆ, 16,163 ಯಾತ್ರಿಕರು ಹಡಗುಗಳಲ್ಲಿ ಬಂದಿದ್ದಾರೆ ಎಂದರು.

‘‘ಆಂತರಿಕ ಸಚಿವ ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಸೌದ್ ಬಿನ್ ನಯೀಫ್ ಮತ್ತು ಮಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಝಲ್‌ರ ಮಾರ್ಗದರ್ಶನದಲ್ಲಿ ಹಜ್ ಯಾತ್ರಿಕರನ್ನು ದಕ್ಷತೆಯಿಂದ ಸ್ವಾಗತಿಸಲು ನಾವು ಹಿಂದಿನಿಂದಲೇ ಯೋಜನೆ ರೂಪಿಸಿದ್ದೆವು. ಈ ಉದ್ದೇಶಕ್ಕಾಗಿ ನಾವು ಎಲ್ಲ ಅರ್ಹ ಸಿಬ್ಬಂದಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದೇವೆ’’ ಎಂದು ಅವರು ನುಡಿದರು.

ಹಜ್ ಮಾರ್ಗದರ್ಶಿಗಳ ತರಬೇತಿ ಪೂರ್ಣ

135 ಪುರುಷ, ಮಹಿಳಾ ‘ತವಾಫಾ’ ಮಾರ್ಗದರ್ಶಿಗಳು ಯಾತ್ರಿಕರ ಸೇವೆಗೆ ಸಿದ್ಧ

ಹಜ್ ಯಾತ್ರಿಕರಿಗೆ ಮಾರ್ಗದರ್ಶನ ನೀಡುವ 135 ಪುರುಷ ಮತ್ತು ಮಹಿಳಾ ‘ತವಾಫಾ’ ಮಾರ್ಗದರ್ಶಿಗಳ ತರಬೇತಿಯನ್ನು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗ (ಎಸ್‌ಸಿಟಿಎಚ್) ಪೂರ್ಣಗೊಳಿಸಿದೆ.

ಪ್ರವಾಸ ಮಾರ್ಗದರ್ಶಿ ಪರವಾನಿಗೆಗಳನ್ನು ಪಡೆದವರಿಗೆ ಈ ತರಬೇತಿಯನ್ನು ನೀಡಲಾಗುತ್ತಿದೆ.

ತರಬೇತಿ ಕೋರ್ಸ್ ಮುಗಿಸಿದ ಪ್ರಥಮ ತಂಡದ ಸದಸ್ಯರಿಗೆ ಪ್ರಮಾಣಪತ್ರ ನೀಡುವ ಕಾರ್ಯಕ್ರಮ ಮಕ್ಕಾದಲ್ಲಿರುವ ‘ಅರಬ್ ದೇಶಗಳ ಯಾತ್ರಿಕರಿಗಾಗಿ ರಾಷ್ಟ್ರೀಯ ತವಾಫಾ ಸಂಸ್ಥೆ (ಎಆರ್‌ಬಿಎಚ್‌ಎಜೆ)’ಯಲ್ಲಿ ಮಂಗಳವಾರ ನಡೆಯಿತು.

ಆಯೋಗವು ಎಆರ್‌ಬಿಎಚ್‌ಎಜೆಯ 135ಕ್ಕೂ ಅಧಿಕ ಪುರುಷ ಮತ್ತು ಮಹಿಳಾ ಮಾರ್ಗದರ್ಶಿಗಳನ್ನು ಗೌರವಿಸಿದೆ ಎಂದು ಎಸ್‌ಸಿಟಿಎಚ್ ಮಹಾ ನಿರ್ದೇಶಕ ಡಾ. ಹಿಶಮ್ ಬಿನ್ ಮುಹಮ್ಮದ್ ಮಅದನಿ ಹೇಳಿದರು.

ಬಾಂಗ್ಲಾದೇಶದಿಂದ 1.25 ಲಕ್ಷ ಯಾತ್ರಿಕರು

ಬಾಂಗ್ಲಾದೇಶದ ಹಜ್ ಯಾತ್ರಿಕರನ್ನು ಹೊತ್ತ ಕೊನೆಯ ವಿಮಾನಗಳು ಶುಕ್ರವಾರ ಬೆಳಗ್ಗೆ ಢಾಕಾದಿಂದ ಹೊರಟಿವೆ.

ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ಮತ್ತು ಸೌದಿ ಅರೇಬಿಯನ್ ಏರ್‌ಲೈನ್ಸ್‌ನ ವಿಶೇಷ ವಿಮಾನಗಳ ಮೂಲಕ ಈಗಾಗಲೇ 1,25,000ಕ್ಕೂ ಅಧಿಕ ಬಾಂಗ್ಲಾದೇಶಿ ಹಜ್ ಯಾತ್ರಿಗಳು ಪವಿತ್ರ ನಗರ ಮಕ್ಕಾ ತಲುಪಿದ್ದಾರೆ.

ಯಾತ್ರಿಕರ ಸಾಗಣೆಗಾಗಿ ಬಾಂಗ್ಲಾದೇಶ ಸರಕಾರವು ಸೌದಿ ಅರೇಬಿಯದ ಸಹಕಾರದೊಂದಿಗೆ ವ್ಯಾಪಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News