ಆ. 19: ಬೀಡ್ಸ್/ಬಿಐಟಿಗೆ ವಿಶ್ವವಿಖ್ಯಾತ ಪರಿಸರ ಸ್ನೇಹಿ ಆರ್ಕಿಟೆಕ್ಟ್ ಡಾ. ಕೆನ್ ಯಾಂಗ್

Update: 2018-08-17 15:44 GMT

ಮಂಗಳೂರು, ಆ. 17 : ವಿಶ್ವವಿಖ್ಯಾತ ಪರಿಸರ ಸ್ನೇಹಿ ಆರ್ಕಿಟೆಕ್ಟ್ ಡಾ. ಕೆನ್ ಯಾಂಗ್ ಅವರು ಮಂಗಳೂರಿನ ಇನೋಳಿಯಲ್ಲಿರುವ ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ( ಬೀಡ್ಸ್) ಮತ್ತು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಾಜಿ (ಬಿಐಟಿ)ಗೆ ಭೇಟಿ ನೀಡಲಿದ್ದಾರೆ. 

ರವಿವಾರ (ಆ.19) ಬೆಳಗ್ಗೆ ಬಿಐಟಿ ನಾಲೇಜ್ ಕ್ಯಾಂಪಸ್ ನ ಅಂತಾರಾಷ್ಟ್ರೀಯ ಸೆಮಿನಾರ್ ಸಭಾಂಗಣದಲ್ಲಿ ಕಾಲೇಜಿನ ಲೆಕ್ಚರ್ಸ್ ಮತ್ತು ಡಿಬೇಟ್ ಕ್ಲಬ್ ಆಶ್ರಯದಲ್ಲಿ ಬೆಳಗ್ಗೆ 7ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಡಾ. ಕೆನ್ ಯಾಂಗ್ ಅವರು 'ಪರಿಸರ ಸ್ನೇಹಿ ವಾಸ್ತುಶಿಲ್ಪ ಮತ್ತು ನೈಸರ್ಗಿಕತೆಗೆ ಪೂರಕವಾಗಿ ಕಟ್ಟಡ ನಿರ್ಮಾಣ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಬಳಿಕ ಸಂವಾದ ನಡೆಯಲಿದೆ.

ಕಾರ್ಯಕ್ರಮದಲ್ಲಿ ನಗರದ ಎಲ್ಲ ಆರ್ಕಿಟೆಕ್ಟ್ ಗಳಿಗೆ, ನಿರ್ಮಾಣ ರಂಗದಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ ಹಾಗು ಎಲ್ಲ ಆಸಕ್ತರಿಗೆ ಭಾಗವಹಿಸುವ ಅವಕಾಶವಿದೆ ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.  ಕೆನ್ ಯಾಂಗ್ : ಮಲೇಷ್ಯಾದ ಕೆನ್ ಅಂತಾರಾಷ್ಟ್ರೀಯ ಖ್ಯಾತಿಯ ಆರ್ಕಿಟೆಕ್ಟ್, ಪರಿಸರಶಾಸ್ತ್ರಜ್ಞ, ಪ್ಲ್ಯಾನರ್. ಪರಿಸರಸ್ನೇಹಿ, ನಿಸರ್ಗಕ್ಕೆ ಪೂರಕ ಆಕರ್ಷಕ ಕಟ್ಟಡಗಳ ನಿರ್ಮಾಣದಲ್ಲಿ ಭಾರೀ ಹೆಸರು ಪಡೆದವರು. ಪರಿಸರ ವಿಜ್ಞಾನ ಆಧರಿತ ಆರ್ಕಿಟೆಕ್ಚರ್ ನ್ನು ಪರಿಚಯಿಸಿದ ಹೆಗ್ಗಳಿಕೆ ಕೆನ್ ಅವರದ್ದು. " ಈ ಗ್ರಹವನ್ನು ಉಳಿಸಬಲ್ಲ 50 ಮಂದಿ" ಎಂಬ ತನ್ನ ಪಟ್ಟಿಯಲ್ಲಿ ಪ್ರತಿಷ್ಠಿತ ಗಾರ್ಡಿಯನ್ ಪತ್ರಿಕೆ ಕೆನ್ ಯಾಂಗ್ ಅವರನ್ನು ಹೆಸರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News