ಥೇನಿ, ಮಧುರೈ ಜಿಲ್ಲೆಗಳಲ್ಲಿ ನೆರೆ ಮುನ್ನೆಚ್ಚರಿಕೆ: ಪರಿಹಾರ ಶಿಬಿರಗಳಿಗೆ 8,410 ಜನರ ವರ್ಗಾವಣೆ

Update: 2018-08-17 15:46 GMT

 ಚೆನ್ನೈ, ಆ. 17: ತಮಿಳುನಾಡಿನ ಥೇನಿ ಹಾಗೂ ಮಧುರೈ ಜಿಲ್ಲೆಗಳ ಸುತ್ತಮುತ್ತ ನೆರೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ ಹಾಗೂ ಮೆಟ್ಟೂರು ಸೇರಿದಂತೆ ಮೂರು ಅಣೆಕಟ್ಟುಗಳಿಂದ 2 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಹೊರತಾಗಿಯೂ ಕಾವೇರಿ ಹಾಗೂ ಭವಾನಿ ನದಿ ದಂಡೆ ಪ್ರದೇಶಗಳಲ್ಲಿ ವಾಸ್ತವ್ಯ ಇರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.

 ಕರ್ನಾಟಕದ ಜಲಾಶಯದಿಂದ ಭಾರೀ ಒಳಹರಿವು ಹಾಗೂ ಮೆಟ್ಟೂರು, ಭವಾನಿ ಸಾಗರ್ ಹಾಗೂ ಅಮರಾವತಿ ಅಣೆಕಟ್ಟಿನಿಂದ 2.30 ಲಕ್ಷ ಕ್ಯೂಸೆಕ್ಸ್ ನೀರನ್ನು ಒಟ್ಟಾಗಿ ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ 8,410 ಜನರಿಗೆ ತಮಿಳುನಾಡಿನ ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಿಂದ 2.07 ಕ್ಯೂಸೆಕ್ಸ್ ನೀರು ಬಿಡುಗಡೆಯಾಗಿರುವುದರಿಂದ ಮೆಟ್ಟೂರ್ ಅಣೆಕಟ್ಟಿನ ಒಳಹರಿವು ಶುಕ್ರವಾರ ಬೆಳಗ್ಗೆ 1.70 ಲಕ್ಷ ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮೆಟ್ಟೂರು ಅಣೆಕಟ್ಟಿನ ನೀರಿನ ಗರಿಷ್ಠ ಮಟ್ಟ 120 ಅಡಿ. ಆದರೆ, ಈಗ ನೀರಿನ ಮಟ್ಟ 120.24ಕ್ಕೆ ಏರಿಕೆಯಾಗಿದೆ. 1.70 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಪೆರಿಯಾರ್ ಹಾಗೂ ವೈಗಾಯಿ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹಾಗೂ ಬಿಡುಗಡೆ ಹಿನ್ನೆಲೆಯಲ್ಲಿ ಥೇನಿ ಹಾಗೂ ಮಧುರೈ ಜಿಲ್ಲೆಗಳಲ್ಲಿ ನೆರೆ ಮುನ್ನಚ್ಚರಿಕೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಬಿ. ಉದಯ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News