ಬೆದರಿಕೆ ಹಿನ್ನೆಲೆ: ಪನ್ಸಾರೆ,ದಾಭೋಲ್ಕರ್ ಕುಟುಂಬ ಸದಸ್ಯರಿಗೆ ಹೆಚ್ಚಿನ ಭದ್ರತೆ

Update: 2018-08-17 16:38 GMT

ಪುಣೆ,ಆ.17: ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರ ಕೊಲೆ ಪ್ರಕರಣದಲ್ಲಿ ಬಂಧಿತ ಶಂಕಿತರಲ್ಲೋರ್ವನಾದ ಅಮೋಲ್ ಕಾಳೆಯ ಡೈರಿ ಕರ್ನಾಟಕ ಪೋಲಿಸರ ಕೈಯಲ್ಲಿದೆ ಹತ್ಯೆಗೀಡಾಗಿರುವ ವಿಚಾರವಾದಿಗಳಾದ ಗೋವಿಂದ ಪನ್ಸಾರೆ ಅವರ ಸೊಸೆ ಡಾ.ಮೇಘಾ ಪನ್ಸಾರೆ ಮತ್ತು ನರೇಂದ್ರ ದಾಭೋಲ್ಕರ್ ಅವರ ಪುತ್ರ ಡಾ.ಹಾಮಿದ್ ದಾಭೋಲ್ಕರ್ ಮತ್ತು ಅವರ ಸೋದರಿ ಹಾಗೂ ಹೋರಾಟಗಾರ್ತಿ ಮುಕ್ತಾ ದಾಭೋಲ್ಕರ್ ಅವರು ಸಂಭಾವ್ಯ ಗುರಿಗಳೆಂದು ಡೈರಿಯಲ್ಲಿ  ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಗುಪ್ತಚರ ಇಲಾಖೆ(ಎಸ್‌ಐಡಿ)ಯು ಈ ಮೂವರಿಗೂ ಎಕ್ಸ್ ದರ್ಜೆಯ ರಕ್ಷಣೆಯನ್ನು ಒದಗಿಸಿದೆ. ಅವರ ಭದ್ರತೆಗಾಗಿ ದಿನದ 24 ಗಂಟೆಯೂ ಇಲಾಖೆಯ ವಿಶೇಷ ರಕ್ಷಣಾ ಘಟಕ(ಎಸ್‌ಪಿಯು)ದಿಂದ ಅಂಗರಕ್ಷಕರನ್ನು ನಿಯೋಜಿಸಲಾಗಿದೆ.

ಕಳೆದ ಜೂನ್‌ನಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕ ವಿಶೇಷ ತನಿಖಾ ತಂಡಕ್ಕೆ ಈ ಡೈರಿ ದೊರಕಿದ್ದು,ಮೂಲಭೂತ ಹಿಂದುತ್ವ ವಾದದ ಟೀಕಾಕಾರರಾಗಿರುವ ಪ್ರಗತಿಪರರು ಮತ್ತು ಚಿಂತಕರ ಪಟ್ಟಿ ಅದರಲ್ಲಿತ್ತು. ಖ್ಯಾತ ಸಾಹಿತಿ-ನಾಟಕಕಾರ-ನಟ ಗಿರೀಶ್ ಕಾರ್ನಾಡ್,ಖ್ಯಾತ ಲೇಖಕಿ-ರಾಜಕಾರಣಿ ಬಿ.ಟಿ.ಲಲಿತಾ ನಾಯ್ಕಾ ಮತ್ತು ನಿಡುಮಾಮಿಡಿ ಪೀಠಾಧೀಶ ವೀರಭದ್ರ ಚನ್ನಮಲ್ಲ ಸ್ವಾಮಿ ಮತ್ತಿತರ ಗಣ್ಯರ ಹೆಸರುಗಳನ್ನು ಪ್ರಮುಖ ಗುರಿಗಳನ್ನಾಗಿ ಡೈರಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿಂದೆ ನಮಗೆ ಸ್ಥಳೀಯ ಪೊಲೀಸ್ ಠಾಣೆಯ ಕಾನಸ್ಟೇಬಲ್ ಮೂಲಕ ರಕ್ಷಣೆಯನ್ನು ಒದಗಿಸಲಾಗಿತ್ತು, ಆದರೆ ಬೆದರಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಎಸ್‌ಐಡಿ ಈಗ ನುರಿತ ಎಸ್‌ಪಿಯು ಸಿಬ್ಬಂದಿಗಳ ರಕ್ಷಣೆಯನ್ನು ನೀಡಿದೆ ಎಂದು ಕೊಲ್ಲಾಪುರದ ಶಿವಾಜಿ ವಿವಿಯಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಡಾ.ಪನ್ಸಾರೆ ಅವರು ಸುದ್ದಿಗಾರರಿಗೆ ತಿಳಿಸಿದರು.

ಎಸ್‌ಐಡಿ ಈ ಮೂವರೂ ದೇಶಾದ್ಯಂತ ಎಲ್ಲಿಗೇ ಪ್ರಯಾಣಿಸಿದರೂ ರಕ್ಷಣೆಯನ್ನು ಒದಗಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News