ನೂತನ ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಆಯ್ಕೆ

Update: 2018-08-17 17:18 GMT

ಇಸ್ಲಾಮಾಬಾದ್, ಆ. 17: ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶುಕ್ರವಾರ ಸಂಸತ್ತು ನ್ಯಾಶನಲ್ ಅಸೆಂಬ್ಲಿಯಲ್ಲಿ ಪಾಕಿಸ್ತಾನದ  ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ ಇಮ್ರಾನ್ ಖಾನ್ 176 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಶೆಹ್ಬಾಝ್ ಶರೀಫ್ ಕೇವಲ 96 ಮತಗಳನ್ನು ಗಳಿಸಿದರು. ಮೂರನೇ ಅತಿ ದೊಡ್ಡ ಪಕ್ಷವಾಗಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಶರೀಫ್‌ರನ್ನು ಬೆಂಬಲಿಸಲು ನಿರಾಕರಿಸಿ ಮತದಾನದಿಂದ ಹೊರಗುಳಿದ ಹಿನ್ನೆಲೆಯಲ್ಲಿ 65 ವರ್ಷದ ಇಮ್ರಾನ್ ಆಯ್ಕೆ ಖಚಿತವಾಗಿತ್ತು.

ನ್ಯಾಶನಲ್ ಅಸೆಂಬ್ಲಿ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ಜುಲೈ 25ರಂದು ಮತದಾನ ನಡೆದಿತ್ತು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಹಾಗೂ ಸೇನೆ ಹಸ್ತಕ್ಷೇಪ ಮಾಡಿದೆ ಎಂಬುದಾಗಿ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ- ಎರಡೂ ಪಕ್ಷಗಳು ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ. ಈ ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಇಮ್ರಾನ್ ಖಾನ್ ಭರವಸೆ ನೀಡಿದ್ದಾರೆ. ಅದೇ ವೇಳೆ, ಚುನಾವಣೆಯಲ್ಲಿ ತಾನು ಹಸ್ತಕ್ಷೇಪ ನಡೆಸಿಲ್ಲ ಎಂಬುದಾಗಿ ಸೇನೆ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಪಾಕಿಸ್ತಾನದ 71 ವರ್ಷಗಳ ಇತಿಹಾಸದ ಅರ್ಧದಷ್ಟು ಅವಧಿಯಲ್ಲಿ ಸೇನೆಯೇ ದೇಶವನ್ನು ನೇರವಾಗಿ ಆಳಿದೆ. ದೇಶದ ಇತಿಹಾಸದಲ್ಲಿ ಎರಡು ನಾಗರಿಕ ಸರಕಾರಗಳ ನಡುವೆ ಅಧಿಕಾರ ಹಸ್ತಾಂತರ ಆಗಿರುವುದು ಇದು ಎರಡನೇ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News