ಮಣಿಪಾಲ: ಮಹಿಳೆಯ ಹೊಟ್ಟೆಯಲ್ಲಿ ದೊಡ್ಡ ಫೈಬ್ರಾಯ್ಡಾ ಗಡ್ಡೆ

Update: 2018-08-17 16:59 GMT

ಉಡುಪಿ, ಆ.17: ಸುಮಾರು ಒಂದು ವರ್ಷದ ಹಿಂದೆಯಷ್ಟೇ ವಿವಾಹವಾದ 30ರ ಹರೆಯದ ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ ದೊಡ್ಡ ಗಾತ್ರದ ಫೈಬ್ರಾಯ್ಡಾ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವಲ್ಲಿ ಕೆಎಂಸಿಯ ವೈದ್ಯರು ಯಶಸ್ವಿಯಾಗಿದ್ದಾರೆ.

ಕುಂದಾಪುರ ನಿವಾಸಿಯಾದ 30 ವರ್ಷ ಪ್ರಾಯದ ಸುಜಾತ (ಹೆಸರು ಬದಲಿಸಲಾಗಿದೆ) ಎಂಬವರು ಹೊಟ್ಟೆ ನೋವಿಗಾಗಿ ಆ.6ರಂದು ಕೆಎಂಸಿ ಆಸ್ಪತ್ರೆಯ ಸ್ತ್ರೀರೋಗ ವಿಭಾಗಕ್ಕೆ ತಪಾಸಣೆಗಾಗಿ ಬಂದಿದ್ದರು. ತಪಾಸಣೆಯ ಸಂದರ್ಭದಲ್ಲಿ ಅವರ ಗರ್ಭಕೋಶದಲ್ಲಿ ದೊಡ್ಡ ಗಾತ್ರದ ಫೈಬ್ರಾಯ್ಡಾ ಗಡ್ಡೆ ಇರುವುದು ಪತ್ತೆಯಾಗಿತ್ತು.

ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಗರ್ಭಕೋಶವನ್ನು ತೆಗೆಯುವುದು ಚಿಕಿತ್ಸೆಯ ಸರಳ ವಿಧಾನವಾಗಿದೆ. ಆದರೆ ಸುಜಾತ ಚಿಕ್ಕ ಪ್ರಾಯದವರಾಗಿದ್ದು, ಮದುವೆಯಾಗಿ ಒಂದು ವರ್ಷವಷ್ಟೇ ಆಗಿರುವುದರಿಂದ ಸಹಜವಾಗಿ ಮಕ್ಕಳ ಬಯಕೆಯನ್ನು ಹೊಂದಿದ್ದರು. ಗರ್ಭಕೋಶ ತೆಗೆದರೆ, ಅವರಿಗೆ ಗರ್ಭ ಧರಿಸುವ ಅವಕಾಶ ಇರುತ್ತಿರಲಿಲ್ಲ. ಗಡ್ಡೆ ತೆಗೆಯಲು ವಿಳಂಬ ಮಾಡಿದರೆ, ಅಥವಾ ತೆಗೆಯದೇ ಇದ್ದಲ್ಲಿ ಅತೀವ ರಕ್ತಸ್ರಾವ, ಕಿಬ್ಬೊಟ್ಟೆ ನೋವು ಹಾಗೂ ಮೂತ್ರ ಪಿಂಡಗಳಿಗೆ ಹಾನಿಯಾಗುವ ಸಂಭವವಿತ್ತು. ಅಲ್ಲದೇ ಆಗಲೂ ಅವರು ಗರ್ಭವತಿಯಾಗಲು ಸಾಧ್ಯವಿರಲಿಲ್ಲ.

ಹೀಗಾಗಿ ಗರ್ಭಕೋಶದಲ್ಲಿದ್ದ ಫೈಬ್ರಾಯ್ಡಾ ಗಡ್ಡೆ ತೆಗೆಯುವ ನಿರ್ಧಾರವನ್ನು ಕೆಎಂಸಿಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಮುರಳೀಧರ ವಿ.ಪೈ ಕೈಗೊಂಡರು. ಡಾ.ಪೈ ಮತ್ತವರ ತಂಡ, ಗರ್ಭಕೋಶ, ಫೆಲೋಪಿಯನ್ ನಾಳ ಅಥವಾ ಅಂಡಾಶಯ ಯಾವುದನ್ನೂ ತೆಗೆಯದೇ ಕೇವಲ ಗಡ್ಡೆಯನ್ನು ಮಾತ್ರ ಯಶಸ್ವಿಯಾಗಿ ತೆಗೆದರು. ಗಡ್ಡೆ 2.5ಕೆ.ಜಿ.ತೂಗುತ್ತಿತ್ತು. ಇಂದರೆ ಸುಮಾರು ಎಂಟು ತಿಂಗಳ ಶಿಶುವಿನ ತೂಕದಷ್ಟು. ಶಸ್ತ್ರಚಿಕಿತ್ಸೆಯ ಬಳಿಕ ಸುಜಾತ ತ್ವರಿತವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡು ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತಿದ್ದಾರೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News