×
Ad

ಮಂಗಳೂರು: ಸಮುದ್ರಕ್ಕಿಳಿದಂತೆ ಮೀನುಗಾರರಿಗೆ ಎಚ್ಚರಿಕೆ

Update: 2018-08-17 23:05 IST

ಮಂಗಳೂರು, ಆ.17: ದ.ಕ. ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅರಬ್ಬಿ ಸಮುದ್ರದಲ್ಲಿ 3.6ರಿಂದ 4 ಮೀಟರ್‌ಗಳಷ್ಟು ಎತ್ತರದಲ್ಲಿ ಅಲೆಗಳು ಅಪ್ಪಳಿಸುತ್ತಿವೆ. ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ.

ಆ.18ರಂದು ಜಿಲ್ಲೆಯ ವಿವಿಧೆಡೆ ಭಾರೀ ಮಳೆ (115ರಿಂದ 160 ಮಿ.ಮೀ.) ಬೀಳುವ ಸಾಧ್ಯತೆಯಿದೆ. ಶಿರಾಡಿ ಮತ್ತು ಸಂಪಾಜೆ ಘಾಟ್‌ಗಳಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಚಾರ್ಮಾಡಿ ಘಾಟ್‌ನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ನೇತ್ರಾವತಿ, ಕುಮಾರಧಾರ, ಪಯಶ್ವಿನಿ, ಫಲ್ಗುಣಿ(ಗುರುಪುರ) ನದಿ ಪಾತ್ರದ ತಗ್ಗು ಪ್ರದೇಶದ ಜನರು ಎತ್ತರ ಪ್ರದೇಶಗಳಿಗೆ ತೆರಳಬೇಕು. ಎಂದಿನಂತೆ ಶಾಲಾ-ಕಾಲಾಜುಗಳ ತರಗತಿಗಳು ನಡೆಯುತ್ತವೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಯಾವುದೇ ಭಾಗದಲ್ಲಿ ಹಾನಿ ಸಂಭವಿಸಿದರೂ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಉಚಿತ ಸಹಾಯ ವಾಣಿ (1077)ಯನ್ನು ಸಂಪರ್ಕಿಸಿ, ದೂರು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News