ಎರಡೂವರೆ ವರ್ಷಗಳ ಜೈಲು ಶಿಕ್ಷೆಯಿಂದ ಪಾರಾದ ಮೆಸ್ಸಿ ಸಹೋದರ

Update: 2018-08-18 14:26 GMT

ಬ್ಯೂನಸ್ ಏರಿಸ್, ಆ.18: ಅರ್ಜೆಂಟಿನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರ ಹಿರಿಯ ಸಹೋದರ ಮಟಿಯಸ್ ಮೆಸ್ಸಿ  ಅವರಿಗೆ ಅಕ್ರಮ ಬಂದೂಕು ಹೊಂದಿದ ತಪ್ಪಿಗಾಗಿ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತಾದರೂ ಅದನ್ನು ರದ್ದುಗೊಳಿಸಿ  ಸಮುದಾಯ ಸೇವೆ ನಡೆಸುವಂತೆ ಆದೇಶಿಸಲಾಗಿದೆ. ಪ್ರಾಸಿಕ್ಯೂಟರ್ ಗಳ ಜತೆ ನಡೆದ ಮಾತುಕತೆ ನಂತರ ಜೈಲು ಶಿಕ್ಷೆ ಬದಲು ಸಮುದಾಯ ಸೇವೆ ನಡೆಸುವಂತೆ ಅವರಿಗೆ ಹೇಳಲಾಯಿತು.

ಕಳೆದ ವರ್ಷದ ಕೊನೆಯ ವೇಳೆಗೆ ರಕ್ತದ ಕಲೆಗಳಿದ್ದ ಸ್ಪೀಡ್ ಬೋಟಿನಲ್ಲಿ ಬಂದೂಕು ಪತ್ತೆಯಾಗಿತ್ತು. ಆಗ ಮಟಿಯಸ್ (35) ಅವರು ಆ ಸ್ಪೀಡ್ ಬೋಟನ್ನು ದಕ್ಷಿಣ ಅಮೆರಿಕಾದ ಪರಾನ ನದಿಯಲ್ಲಿ ಚಲಾಯಿಸುತ್ತಾ ಅದು ಮರಳಿನ ದಿಣ್ಣೆಗೆ ಢಿಕ್ಕಿ ಹೊಡೆಯುವಂತೆ ಮಾಡಿದ್ದರು. ಆದರೆ ಬೋಟಿನಲ್ಲಿ ಪತ್ತೆಯಾದ ಬಂದೂಕು ಅವರದ್ದಲ್ಲ ಎಂದು ಅವರ ಕಾನೂನು ತಂಡ ಹೇಳಿಕೊಂಡಿತ್ತು. ಘಟನೆಯಲ್ಲಿ ಮಟಿಯಸ್ ಅವರ ದವಡೆ  ಮುರಿದಿತ್ತಲ್ಲದೆ ಇತರ ಗಾಯಗಳೂ ಅವರಿಗುಂಟಾಗಿದ್ದವು.

ಈ ಹಿಂದೆ ಕೂಡ ಅವರು ಇಂತಹುದೇ ಒಂದು ಪ್ರಕರಣದಲ್ಲಿ ಸಿಲುಕಿದ್ದರು. ಅವರ ಕಾರಿನಲ್ಲಿ ಪರವಾನಗಿ ರಹಿತ ಬಂದೂಕು ಪತ್ತೆಯಾದ ನಂತರ ಪೊಲೀಸರು ಅವರನ್ನು 2015ರಲ್ಲಿ ಬಂಧಿಸಿದ್ದರು. ಅದಕ್ಕೂ ಮುಂಚೆ 2008ರಲ್ಲಿ  ತಮ್ಮ ಬೆಲ್ಟ್ ನಲ್ಲಿ ಗುಂಡುಗಳಿಂದ ತುಂಬಿದ್ದ ಗನ್ ಹೊಂದಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.

ಮೆಸ್ಸಿ ಸಹೋದರರಲ್ಲಿ ಮಟಿಯಸ್ ಎರಡನೆಯವರಾಗಿದ್ದು  ಅವರ ಇನ್ನೊಬ್ಬ ಸೋದರ ರೊಡ್ರಿಗೋಗೆ 38 ವರ್ಷ ವಯಸ್ಸು. ಲಯನೆಲ್ ಮೆಸ್ಸಿಗೆ 31 ವರ್ಷ ವಯಸ್ಸಾಗಿದ್ದರೆ ಅವರಿಗೆ ಮರಿಯಾ ಎಂಬ ಹೆಸರಿನ ಸೋದರಿಯೂ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News