ಬಂಟ್ವಾಳ: ವಾರದಿಂದ ಸುರಿಯುತ್ತಿದ್ದ ಮಳೆಗೆ ಅಲ್ಪವಿರಾಮ

Update: 2018-08-18 15:18 GMT

ಬಂಟ್ವಾಳ, ಆ. 18: ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಮಳೆಯ ಅರ್ಭಟವು ಶನಿವಾರ ಅಲ್ಪವಿರಾಮವಿದ್ದು, ಇಡೀದಿನ ಬಿಸಿಲ ವಾತಾವರಣ ಉಂಟಾಗಿದ್ದು, ನೇತ್ರಾವತಿಯಲ್ಲಿ ಪ್ರವಾಹದ ಅಬ್ಬರಕೂಡ ಕಡಿಮೆಯಾಗಿದೆ. ನೆರೆಯಿಂದ ತತ್ತರಿಸಿದ್ದ ಜನಜೀವನ ಸಹಜ ಸ್ಥಿತಿಗೆ ಬಂದಿದೆ.

ಸಂಜೆಯ ವೇಳೆಗೆ ನೇತ್ರಾವತಿ ನದಿ ಪಾತ್ರದೊಳಗೆ ನೀರು ಹರಿಯುತ್ತಿದ್ದು, ನೀರಿನ ಮಟ್ಟ 6.8 ಮೀ. ಎತ್ತರದಲ್ಲಿತ್ತು. ಹಾಗೆಯೇ ನೆರೆಯಿಂದ ಜಲಾವೃತಗೊಂಡಿದ್ದ ನದಿತೀರದ ತಗ್ಗು ಪ್ರದೇಶಗಳಾದ ಪಾಣೆಮಂಗಳೂರಿನ ಗೂಡಿನಬಳಿ, ಆಲಡ್ಕ, ಬಂಟ್ವಾಳದ ಜಕ್ರಿಬೆಟ್ಟು, ಬಡ್ಡಕಟ್ಟೆ, ಬಸ್ತಿಪಡ್ಪು, ಕಂಚಿಕಾರಪೇಟೆ, ನಾವೂರು, ಬ್ರಹ್ಮರಕೊಟ್ಲು, ತಲಪಾಡಿ ಮೊದಲಾದೆಡೆಯಲ್ಲಿ ನೀರು ಪೂರ್ಣಪ್ರಮಾಣದಲ್ಲಿ ಇಳಿಮುಖವಾಗಿದೆ.

ನೀರಿನಿಂದ ಮುಳುಗಡೆಯಾದ ಹಿನ್ನಲೆಯಲ್ಲಿ ಗಂಜಿಕೇಂದ್ರ, ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದ ನಿರಾಶ್ರಿತರು ಶನಿವಾರ ಮರಳಿ ತಮ್ಮ ಸ್ವಸ್ಥಾನಕ್ಕೆ ತೆರಳಿದ್ದಾರೆ. ಕಳೆದ ಒಂದುವಾರದಿಂದ ನೆರೆ ಪರಿಹಾರಕಾರ್ಯದಲ್ಲಿ ನಿರತರಾಗಿದ್ದ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಕಂದಾಯಾಧಿಕಾರಿಗಳ ತಂಡ ಹಾಗೂ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮತ್ತವರ ಸಿಬ್ಬಂದಿ ತಂಡ ಸದ್ಯ ನಿಟ್ಟುಸಿರು ಬಿಟ್ಟಿದೆ. ವಾರದ ಸುದೀರ್ಘ ರಜೆಯ ಬಳಿಕ ಶಾಲೆಗಳು ಆರಂಭಗೊಂಡಿತ್ತು. ಬಂಟ್ವಾಳದಾದ್ಯಂತ ಬಂದಿರುವ ಪ್ರವಾಹದಿಂದ ಯಾವುದೇ ಸಾವು, ನೋವುಗಳ ಸಂಭವಿಸಲಿಲ್ಲ. ಆದರೆ ಗಾಳಿ, ಮಳೆಗೆ ಕೆಲ ಮನೆಗಳಿಗೆ ಹಾನಿಯಾಗಿದ್ದು, ಸುಮಾರು 10 ಲಕ್ಷ ರೂ, ನಷ್ಟ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News