ಅಮೇರಿಕ: ಅಕ್ರಮ ವಲಸಿಗರ 565 ಮಕ್ಕಳು ಇನ್ನೂ ಬಂಧನ ಕೇಂದ್ರದಲ್ಲಿ

Update: 2018-08-18 15:23 GMT

ವಾಶಿಂಗ್ಟನ್, ಆ. 18: ಅಕ್ರಮ ವಲಸಿಗರ ಮಕ್ಕಳನ್ನು ಅವರ ಹೆತ್ತವರಿಗೆ ಮರಳಿಸಲು ನ್ಯಾಯಾಲಯವೊಂದು ನೀಡಿದ ಗಡುವು ಮುಗಿದು ಮೂರು ವಾರಗಳಾದರೂ, ಅಮೆರಿಕ ಸರಕಾರವು ಅಕ್ರಮ ವಲಸಿಗರ 565 ಮಕ್ಕಳನ್ನು ಇನ್ನೂ ತನ್ನ ಸುಪರ್ದಿಯಲ್ಲೇ ಇಟ್ಟುಕೊಂಡಿದೆ.

ಈ ಪೈಕಿ, ಐದು ವರ್ಷ ಹಾಗೂ ಅದಕ್ಕಿಂತಲೂ ಚಿಕ್ಕ 24 ಮಕ್ಕಳನ್ನು ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯ ನಿರಾಶ್ರಿತ ಪುನರ್ವಸತಿ ಕಚೇರಿ ನೋಡಿಕೊಳ್ಳುತ್ತಿದೆ.

565 ಮಕ್ಕಳ ಪೈಕಿ 366 ಮಕ್ಕಳ ಹೆತ್ತವರು ಅಮೆರಿಕದಿಂದ ಹೊರಗಿದ್ದಾರೆ, ಹಾಗಾಗಿ ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸುವುದು ಅಸಾಧ್ಯವಾಗಿದೆ ಎಂದು ನಿರಾಶ್ರಿತ ಪುನರ್ವಸತಿ ಕಚೇರಿ ತಿಳಿಸಿದೆ.

ಮಕ್ಕಳೊಂದಿಗೆ ಮರುಸೇರ್ಪಡೆಗೊಳ್ಳಲು ತಾವು ಬಯಸುವುದಿಲ್ಲ ಎಂಬುದಾಗಿ 154 ಮಕ್ಕಳ ಹೆತ್ತವರು ಹೇಳಿದ್ದಾರೆ ಎಂದು ಅದು ಹೇಳಿದೆ.

180ಕ್ಕೂ ಅಧಿಕ ಮಕ್ಕಳ ಹೆತ್ತವರನ್ನು ಮಕ್ಕಳಿಗೆ ಬೆದರಿಕೆ ಎಂಬುದಾಗಿ ಪರಿಗಣಿಸಲಾಗಿದ್ದು, ಅವರಿಗೆ ಮಕ್ಕಳನ್ನು ಹಸ್ತಾಂತರಿಸಲಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News