ಜೋಡುಪಾಲ ಮಣ್ಣು ಕುಸಿತ: 3 ಮಂದಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ

Update: 2018-08-18 15:36 GMT

ಸುಳ್ಯ, ಆ.18: ಮಾಣಿ-ಮೈಸೂರು ಹೆದ್ದಾರಿ ಮಧ್ಯೆದಲ್ಲಿರುವ ಜೋಡುಪಾಲ ಎಂಬಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಿಂದಾಗಿ ರಸ್ತೆಯು ಇಬ್ಭಾಗವಾಗಿದೆ. ಇಬ್ಬರು ಮೃತಪಟ್ಟಿದ್ದು, ಅಲ್ಲದೆ 3 ಮಂದಿ ನಾಪತ್ತೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಭೂ ಕುಸಿತದಿಂದಾಗಿ ಮೂರು ಮನೆಗಳು ಮಳೆಯಲ್ಲಿ ಕೊಚ್ಚಿಹೋಗಿವೆ. ರಾಷ್ಟ್ರೀಯ ವಿಪತ್ತು ನಿಗ್ರಹ ದಳದ 26 ಮಂದಿ, 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ, ಫೈರ್ ಸಿಬ್ಬಂದಿ ಹಾಗೂ 100ಕ್ಕೂ ಅಧಿಕ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಳೆಯು ಕಾರ್ಯಚರಣೆಗೆ ಅಡ್ಡಿಪಡಿಸುತ್ತಿದ್ದು ಅಲ್ಲದೆ ಹೆಲಿಕಾಪ್ಟರ್ ಮೂಲಕವು ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ.

ಜೋಡುಪಾಲದ 4 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ 25 ಮನೆಗಳಲ್ಲಿರುವ ಜನರನ್ನು ಖಾಲಿ ಮಾಡಲಾಗಿದ್ದು, ಅವರನ್ನು ಅರಂತೋಡು ತೆಕ್ಕಿಲ್ ಹಾಲ್, ಸಂಪಾಜೆ, ಪೆರಾಜೆಯ ಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಅವರನ್ನು ಇರಿಸಲಾಗಿದೆ. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಸಂಗ್ರಹಿಸಿದ ಆಹಾರ, ಬಟ್ಟೆ, ಇತ್ಯಾದಿ ವಸ್ತುಳನ್ನು ವಿತರಿಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸಚಿವ ಯು.ಟಿ.ಖಾದರ್, ಡಿಸಿ, ಎಸ್ಪಿ ಭೇಟಿ

ಜೋಡುಪಾಲದಲ್ಲಿ ಭೂಕುಸಿತ ಪ್ರದೇಶಕ್ಕೆ ಸಚಿವ ಯು.ಟಿ.ಖಾದರ್, ಡಿಸಿ, ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ನಿರಾಶ್ರಿತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಧೈರ್ಯ ತುಂಬಿದ್ದಾರೆ.

ರಾಷ್ಟ್ರೀಯ ವಿಪತ್ತು ದಳ, ದ.ಕ. ಪೊಲೀಸ್, ಗೃಹರಕ್ಷಕ ದಳ ಹಾಗೂ ಸ್ವಯಂ ಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಅಲ್ಲದೆ ಕಾರ್ಯಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ, ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗುವುದು.
-ಸೆಂಥಿಲ್, ಡಿಸಿ

ಜನರನ್ನು ಸುರಕ್ಷಿತರನ್ನಾಗಿಸುವುದು ನಮ್ಮ ಕರ್ತವ್ಯವಾಗಿದೆ. ಜೋಡುಪಾಲ 4 ಕಿ.ಮೀ ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸಲಾಗುವುದು. ಕೆಲವು ಮಂದಿಯು ನಾಪತ್ತೆಯಾಗಿರುವ ಶಂಕೆಯಿದ್ದು, ದ.ಕ ಪೊಲೀಸ್ ಹಾಗೂ ರಾಷ್ಟ್ರೀಯ ವಿಪತ್ತು ನಿಗ್ರಹ ದಳದಿಂದ ರಕ್ಷಣಾ ಕಾರ್ಯಚರಣೆ ಮುಂದುವರಿಯಲಿದೆ.
-ಡಾ. ರವಿಕಾಂತೇಗೌಡ, ಎಸ್ಪಿ

ಜೋಡುಪಾಲ ಮಡಿಕೇರಿ ವ್ಯಾಪ್ತಿಗೆ ಒಳಪಟ್ಟಿದ್ದು, ಅಲ್ಲಿನ ಅಧಿಕಾರಿಗಳಿಗೆ ಇಲ್ಲಿಗೆ ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕಾರ್ಯಚರಣೆಗೆ ಎನ್.ಡಿ.ಆರ್.ಎಫ್, ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಈ ಘಟನೆ ಕುರಿತು ಚರ್ಚಿಸಿದ್ದು, ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆದೇಶಿಸಿದ್ದಾರೆ.

-ಯು.ಟಿ.ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ

ಮಗಳು, ಸಂಬಂಧಿಕರನ್ನು ಕಳೆದುಕೊಂಡ ದು:ಖದಲ್ಲಿ ಸೋಮಯ್ಯ

ಜೋಡುಪಾಲದ ಗುಡ್ಡದ ಮನೆಯೊಂದರಲ್ಲಿದ್ದ ವಾಸಿಸುತ್ತಿದ್ದ ಆಶಾ ಕಾರ್ಯಕರ್ತೆ ಗೌರಮ್ಮ, ಪತಿ ಬಸಪ್ಪ ಹಾಗೂ ಇವರ ಮನೆಯಿಂದ ಶಾಲೆಗೆ ಹೋಗುತ್ತಿದ್ದ ಬೆಟ್ಟತ್ತಾರಿನ ಸೋಮಯ್ಯ ಜಯಂತಿ ದಂಪತಿಗಳ ಪುತ್ರಿ ಮಂಜುಳ(13) ವಾಸಿಸುತ್ತಿದ್ದ ಮನೆಯು ಭೂ ಕುಸಿತದಿಂದಾಗಿ ಸಂಪೂರ್ಣ ಕೊಚ್ಚಿ ಹೋಗಿದ್ದು, ಇವರನ್ನು ಇನ್ನೂ ಕೂಡ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇ ಬಗ್ಗೆ ಸೋಮಯ್ಯ ಅಳಲು ತೋಡಿಕೊಂಡಿದ್ದಾರೆ.

Writer - ರಫೀಕ್ ಚೆಂಗಳ

contributor

Editor - ರಫೀಕ್ ಚೆಂಗಳ

contributor

Similar News