ವೈಭವ್ ರಾವತ್ ಬಿಡುಗಡೆಗೆ ಆಗ್ರಹಿಸಿ ಧರಣಿ
ಮುಂಬೈ, ಆ.18: ಸ್ಫೋಟಕ ವಸ್ತುಗಳು ಮನೆಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಮಹಾರಾಷ್ಟ್ರದ ಎಟಿಎಸ್‌ನಿಂದ ಬಂಧಿಸಲ್ಪಟ್ಟಿರುವ ಸಂಘಪರಿವಾರ ಸಂಘಟನೆಯ ಕಾರ್ಯಕರ್ತ ವೈಭವ್ ರಾವತ್‌ನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಸ್ಥಳೀಯ ಕೆಲ ಸಂಘಟನೆಗಳು ಶುಕ್ರವಾರ ಧರಣಿ ನಡೆಸಿದವು.
ಸೊಪಾರ ಗ್ರಾಮದಿಂದ ನಲ್ಲಸೊಪಾರ ರೈಲ್ವೇ ನಿಲ್ದಾಣದವರೆಗೆ ನಡೆದ ಪ್ರತಿಭಟನಾ ಜಾಥಾದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ಸ್ಫೋಟ ನಡೆಸಲು ವೈಭವ್ ರಾವತ್ ಹಾಗೂ ಇತರರು ಸಂಚು ಹೂಡಿದ್ದರು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದರು. ವೈಭವ್ ರಾವತ್ ಸಹಚರರಾದ ಶರದ್ ಕಲಾಸ್ಕರ್ ಹಾಗೂ ಸುಧನ್ವ ಗೊಂಡಳೇಕರ್‌ರನ್ನೂ ಬಂಧಿಸಲಾಗಿದೆ.
ವಿಚಾರವಾದಿಗಳಾದ ನರೇಂದ್ರ ದಾಭೋಳ್ಕರ್ ಮತ್ತು ಗೋವಿಂದ ಪನ್ಸಾರೆ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಇವರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.