ಮಠದಲ್ಲಿ ಬಾಲಸನ್ಯಾಸ ನೀಡಿದರೆ ಕಾನೂನು ಹೋರಾಟ: ಕೇಮಾರು ಶ್ರೀ

Update: 2018-08-18 16:54 GMT

ಉಡುಪಿ, ಆ.18: ಮಠಗಳಲ್ಲಿ ಬಾಲ ಸನ್ಯಾಸ ಕೊಡುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಎಲ್ಲ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಹೇಗೆ ಅಪರಾಧವೋ ಅದೇ ರೀತಿ ಬಾಲ ಸನ್ಯಾಸವನ್ನು ಅಪರಾಧ ಎಂಬುದಾಗಿ ಕಾನೂನು ಪರಿಗಣಿಸಬೇಕು. ಮುಂದಿನ ದಿನಗಳಲ್ಲಿ ಬಾಲ ಸನ್ಯಾಸ ನೀಡಿದರೆ ಕಾನೂನು ಮೂಲಕ ಹೋರಾಟ ನಡೆಸಲಾಗುವುದು ಎಂದು ಕೇಮಾರು ಸಾಂದೀಪನಿ ಮಠದ ಶ್ರೀಈಶ ವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.

ಶಿರೂರು ಶ್ರೀ ಅಭಿಮಾನಿ ಸಮಿತಿಯ ವತಿಯಿಂದ ಶನಿವಾರ ಉಡುಪಿಯ ಮಥುರಾ ಕಂಫರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ವೃಂದಾವನಸ್ಥ ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಈ ಕುರಿತು ಕೊಡಚಾದ್ರಿ ಟ್ರಸ್ಟ್‌ನಲ್ಲಿ ಚರ್ಚೆ ನಡೆಸಲಾಗಿದ್ದು, ಎಲ್ಲಿಯಾದರೂ ಬಾಲ ಸನ್ಯಾಸ ನೀಡಿದ್ದಲ್ಲಿ ಅದರ ವಿರುದ್ಧ ಕಾನೂನು ತಜ್ಞರ ಮೂಲಕ ಕಾನೂನು ಹೋರಾಟ ನಡೆಸುವ ಬಗ್ಗೆ ನಿರ್ಣಯ ಮಾಡಲಾಗಿದೆ ಎಂದ ಅವರು, ಶಿರೂರು ಸ್ವಾಮೀಜಿಯ ಸಾಮಾಜಿಕ ಬದುಕು ಅನುಕರಣೀಯ. ಅವರದ್ದು ನೈಜ್ಯ ಬದುಕೇ ಹೊರತು ಮುಖವಾಡದ ಬದುಕು ಅಲ್ಲ ಎಂದರು.

ಸಮಿತಿಯ ಕಾನೂನು ಸಲಹೆಗಾರರಾಗಿರುವ ನ್ಯಾಯವಾದಿ ರವಿಕಿರಣ್ ಮುರ್ಡೆಶ್ವರ ಮಾತನಾಡಿ, ಆರೋಗ್ಯವಂತರಾಗಿದ್ದ ಸ್ವಾಮೀಜಿ ಸಾವಿಗೀಡಾದಾಗ ಅನುಮಾನಗಳು ಸಹಜವಾಗಿ ಮೂಡುತ್ತವೆ. ಈ ವಿಚಾರದಲ್ಲಿ ನಾವು ಜವಾಬ್ದಾರಿಯುತವಾಗಿ, ಪ್ರಜ್ಞಾವಂತರಾಗಿ ವರ್ತಿಸಬೇಕು. ನಾವು ನಿಷ್ಕ್ರಿಯ ರಾದರೆ ನ್ಯಾಯ ದೊರೆಯುವುದಿಲ್ಲ. ಈ ಸಾವಿನ ಹಿಂದೆ ಇರುವವರಿಗೆ ಶಿಕ್ಷೆಯಾಗಬೇಕಾದರೆ ಈ ಪ್ರಕರಣದ ಬಗ್ಗೆ ದೂರು ದಾಖಲಾಗಬೇಕು. ಈ ಸಂಬಂಧ ಎಫ್‌ಐಆರ್ ದಾಖಲಿಸುವುದು ಸ್ವಾಮೀಜಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಆಗಿದೆ ಎಂದು ತಿಳಿಸಿದರು.

ಶಿರೂರು ಸ್ವಾಮೀಜಿಯ ಸಹೋದರ ವಾದಿರಾಜ ಆಚಾರ್ಯ, ಉದ್ಯಮಿ ಗಳಾದ ಮನೋಹರ್ ಶೆಟ್ಟಿ, ಎರ್ಮಾಳ್ ಹರೀಶ್, ಸಮಿತಿಯ ಗೌರವಾಧ್ಯಕ್ಷ ಜಯರಾಮ್ ಅಂಬೆಕಲ್ಲು, ಮಡಾಮಕ್ಕಿ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿ ವಂದಿಸಿದರು. ನವೀ ರಾವ್ ಕಾರ್ಯಕ್ರಮ ನಿರೂಪಿಸಿದರು.

ಆರಾಧನೆ ವಿಳಂಬದ ಹಿಂದೆ ಕುತಂತ್ರ

ಶಿರೂರು ಸ್ವಾಮೀಜಿಯ ಆರಾಧನೆ ವಿಳಂಬವಾಗಿದೆ. ಅದನ್ನು ಶಿರೂರು ಮಠದಲ್ಲೇ ಮಾಡಬೇಕೆಂದಿಲ್ಲ. ಎಲ್ಲೂ ಕೂಡ ಮಾಡಬಹುದು. ಅದನ್ನು ಮಾಡಿ ಬಳಿಕ ಸಮಾಧಿಗೆ ತೀರ್ಥ ಪ್ರೋಕ್ಷಣೆ ಮಾಡುವುದು ಬಹಳ ಮುಖ್ಯ. ಸಂಬಂಧ ಪಟ್ಟವರು ಶೀಘ್ರದಲ್ಲೇ ಆರಾಧನೆಯನ್ನು ಮಾಡಬೇಕು. ಆರಾಧನೆಯನ್ನು ಮುಂದೂಡುತ್ತಿರುವುದರ ಹಿಂದೆ ಕುತಂತ್ರ ಅಡಗಿದೆ ಎಂಬ ಸಂಶಯ ಕಾಡು ತ್ತಿದೆ. ಇದು ಸ್ವಾಮೀಜಿಗೆ ಮಾಡುತ್ತಿರುವ ಅಪಮಾನವಾಗಿದೆ. ಆರಾಧನೆ ವಿಳಂಬದಿಂದ ಭಕ್ತಾಧಿಗಳು ನೊಂದಿದ್ದಾರೆ ಎಂದು ಕೇಮಾರು ಶ್ರೀಈಶ ವಿಠಲ ದಾಸ ಸ್ವಾಮೀಜಿ ಹೇಳಿದರು.

ಮಠದೊಳಗೆ ಭಾವಚಿತ್ರ ಕೊಂಡೊಯ್ಯಲು ನಿರಾಕರಣೆ

ಶ್ರದ್ಧಾಂಜಲಿ ಕಾರ್ಯಕ್ರಮದ ಬಳಿಕ ಸಮಿತಿಯ ವತಿಯಿಂದ ಸ್ವಾಮೀಜಿಯ ಭಾವಚಿತ್ರದೊಂದಿಗೆ ರಥಬೀದಿಯಲ್ಲಿ ಮೆರವಣಿಗೆ ನಡೆಯಿತು. ಈ ವೇಳೆ ಶಿರೂರು ಮಠದಲ್ಲಿದ್ದ ದ್ವಂದ್ವ ಸೋದೆ ಮಠದ ಸಿಬ್ಬಂದಿಗಳು ಮಠದ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮಠದ ಹೊರಗಡೆ ಸ್ವಾಮೀಜಿಯ ಭಾವಚಿತ್ರವನ್ನು ಇರಿಸಿ ನುಡಿನಮನ ಸಲ್ಲಿಸಲಾಯಿತು.

‘ಮೂರು ಪರ್ಯಾಯ ಪೂರೈಸಿದ ಹಾಗೂ 48 ವರ್ಷ ಶ್ರೀಕೃಷ್ಣ ಪೂಜೆ ಮಾಡಿದ ಶೀರೂರು ಸ್ವಾಮೀಜಿಗಳ ಭಾವಚಿತ್ರ ಮಠದೊಳಗೆ ಕೊಂಡೊಯ್ಯಲು ಅವಕಾಶ ನೀಡದಿರುವುದು ಬಹಳ ಬೇಸರದ ಸಂಗತಿ. ಇದು ಸಂತ ಪರಂಪರೆ, ಓರ್ವ ಪೀಠಾಧಿಪತಿಗೆ ಮಾಡಿದ ಘೋರ ಅವಮಾನ. ಕೊನೆಯ ಪಕ್ಷ ಮಠದ ಬಾಗಿಲನ್ನಾದರೂ ತೆರಬೇಕಾಗಿತ್ತು. ಅದಕ್ಕೂ ಅವಕಾಶ ನೀಡಿಲ್ಲ ಎಂದು ಕೇಮಾರು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News