ಶಿರೂರು ಸ್ವಾಮೀಜಿ ನಿಗೂಢ ಸಾವಿನ ಪ್ರಕರಣ: ತಿಂಗಳಾದರೂ ಬಾರದ ಅಂತಿಮ ಮರಣೋತ್ತರ ಪರೀಕ್ಷೆ ವರದಿ

Update: 2018-08-18 16:59 GMT

ಉಡುಪಿ, ಆ.18: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ  ಆ.19 ಒಂದು ತಿಂಗಳು ಪೂರ್ಣಗೊಳ್ಳಲಿದ್ದು, ಪ್ರಕರಣದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯು ಈವರೆಗೂ ಬಾರದಿರುವುದರಿಂದ ಇಡೀ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದು ಕೊಂಡಿದೆ.

ಜು.17ರಂದು ಅನಾರೋಗ್ಯಕ್ಕೆ ತುತ್ತಾಗಿದ್ದ ಶಿರೂರು ಸ್ವಾಮೀಜಿ ಬೆಳಗ್ಗೆ 11ಗಂಟೆಗೆ ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜು.18ರಂದು ಬೆಳಗಿನ ಜಾವ 1:05ರ ಸುಮಾರಿಗೆ ಕೆಎಂಸಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಜು.19ರಂದು ಬೆಳಗ್ಗೆ 8:30ರ ಸುಮಾರಿಗೆ ಮೃತಪಟ್ಟರು.

ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸ್ವಾಮೀಜಿಯ ರಕ್ತದಲ್ಲಿ ವಿಷದ ಅಂಶ ಪತ್ತೆಯಾಗಿರುವುದಾಗಿ ತಿಳಿಸಿದ್ದರು. ಇದು ಸ್ವಾಮೀಜಿಯ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕಾಡುವಂತೆ ಮಾಡಿತು. ಈ ಬಗ್ಗೆ ಸ್ವಾಮೀಜಿಯ ಸಾವಿನಲ್ಲಿ ಸಂಶಯವಿರುವುದಾಗಿ ಸಹೋದರ ಲಾತವ್ಯ ಆಚಾರ್ಯ ನೀಡಿದಂತೆ ಹಿರಿಯಡ್ಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ತನಿಖೆ ಆರಂಭಿಸಿ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು. ಉಡುಪಿ ಹಾಗೂ ಮೂಲಮಠವನ್ನು ವಶಕ್ಕೆ ಪಡೆದು ಹಲವು ಮಾದರಿಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೊೀಗಲಾಯಕ್ಕೆ ಕಳುಹಿಸಿಕೊಡಲಾಗಿತ್ತು.

ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಸ್ಪತ್ರೆಯವರು ಜು.30 ರಂದು ಒಪ್ಪಿಸಿದ್ದರು. ಇದರಲ್ಲಿ ಅಂತಿಮ ವರದಿಯನ್ನು ವಿಧಿ ವಿಜ್ಞಾನ ಪ್ರಯೋ ಗಾಲಯದ ವರದಿಯ ಬಂದ ನಂತರವೇ ನೀಡಲಾಗುವುದು ಎಂದು ಹೇಳ ಲಾಗಿತ್ತು. ಆದರೆ ಪ್ರಕರಣ ಸಂಭವಿಸಿ ತಿಂಗಳಾದರೂ ಈವರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿಲ್ಲ. ಹಾಗಾಗಿ ಈ ಪ್ರಕರಣದ ರಹಸ್ಯ ಇನ್ನೂ ಬಯಲಾಗಿಲ್ಲ. ಪೊಲೀಸರು ಕೂಡ ಈ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಈ ಮಧ್ಯೆ ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ‘ಒಂದು ಅಪಘಾತ, ಕಳ್ಳತನ ನಡೆದರೂ ತಕ್ಷಣವೇ ಅದರ ಮಾಹಿತಿ ನ್ಯಾಯಾಲಯಕ್ಕೆ ಬರುತ್ತದೆ. ಆದರೆ ಇಂದಿಗೂ ಕೂಡ ಶಿರೂರು ಸ್ವಾಮೀಜಿಯ ಸಾವಿನ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿಯೇ ಇಲ್ಲ. ಯಾಕೆಂದರೆ ಈ ಸಂಬಂಧ ಎಫ್‌ಐಆರ್ ದಾಖಲೇ ಆಗಿಲ್ಲ. ನ್ಯಾಯಾಲಯಕ್ಕೆ ಮಾಹಿತಿಯೇ ಇಲ್ಲದಿದ್ದರೆ ಈ ಪ್ರಕರಣದಲ್ಲಿ ನ್ಯಾಯ ಹೇಗೆ ಸಿಗುವುದು ಹೇಗೆ’ ಎಂದು ಸ್ವಾಮೀಜಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಪ್ರಶ್ನಿಸಿದ್ದಾರೆ.

ಆದರೆ ಪೊಲೀಸರ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಎಫ್‌ಐಆರ್ ದಾಖಲಿಸುವ ಅಗತ್ಯವೇ ಇಲ್ಲ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯಲ್ಲಿ ಸ್ವಾಮೀಜಿಯದ್ದು ಕೊಲೆ ಎಂಬುದಾಗಿ ಬಂದರೆ, ಈಗಾಗಲೇ ಮೃತರ ಸಹೋದರ ನೀಡಿದ ಪ್ರಕರಣವು ಕೊಲೆ ಪ್ರಕರಣವಾಗಿ ಪರಿವರ್ತನೆಯಾಗುತ್ತದೆ. ಪೆರ್ಡೂರು ದನದ ವ್ಯಾಪಾರಿ ಹುಸೇನಬ್ಬ ಪ್ರಕರಣ ದಲ್ಲೂ ಇದೇ ರೀತಿ ಕೊಲೆ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಿರೂರು ಸ್ವಾಮೀಜಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಇಂದಿಗೂ ಅಂತಿಮ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ. ಈ ರೀತಿ ಯಾವುದೇ ಪ್ರಕರಣದಲ್ಲಿ ವಿಳಂಬ ಆಗಿಲ್ಲ. ಮೃತರಾದವರು ಸ್ವಾಮೀಜಿಯಾಗಿರುವುದರಿಂದ ಸಾಮಾನ್ಯ ಪ್ರಕರಣದಲ್ಲಿ ಬರುವುದಕ್ಕಿಂತ ಶೀಘ್ರವೇ ವರದಿ ಬರಬೇಕಾಗಿತ್ತು. ಕೊಲೆ ಶಂಕೆ ಇದ್ದರೂ ಅಂತಿಮ ವರದಿ ಬಂದಿಲ್ಲ. ವರದಿ ಬರುವುದು ತಡವಾದರೆ ವಿಷ ಕೂಡ ಅದರ ವಿಷತ್ವವನ್ನು ಕಳೆದುಕೊಳ್ಳುತ್ತದೆ. ಆದುದರಿಂದ ಆದಷ್ಟು ಬೇಗ ಅಂತಿಮ ವರದಿ ಬರಬೇಕು.

-ರವಿಕಿರಣ್ ಮುರ್ಡೇಶ್ವರ, ನ್ಯಾಯವಾದಿ

ಶಿರೂರು ಸ್ವಾಮೀಜಿ ಸಾವಿನ ಪ್ರಕರಣದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ಆ ವರದಿ ಬಂದ ನಂತರವೇ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯನ್ನು ನೀಡ ಲಿದ್ದಾರೆ.
-ಲಕ್ಷ್ಮಣ್ ನಿಂಬರ್ಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News