ಟೋಲ್ ಸಂಗ್ರಹ: ಸೆಪ್ಟಂಬರ್‌ವರೆಗೆ ಯಥಾಸ್ಥಿತಿ ಮುಂದುವರಿಕೆ

Update: 2018-08-18 17:06 GMT

ಉಡುಪಿ, ಆ.18: ಮುಂದಿನ ಸೆಪ್ಟೆಂಬರ್ ತಿಂಗಳ ಕೊನೆಯವರೆಗೆ ಜಿಲ್ಲೆಯ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ಟೋಲ್ ಸಂಗ್ರಹದಲ್ಲಿ ಈಗಿರುವ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಈ ಕುರಿತು ಇಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಾಸಕರು, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು ಹಾಗೂ ಗುತ್ತಿಗೆ ಕಂಪೆನಿಯ ಅಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 ಆ.16ರಿಂದ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ಯಾವುದೇ ಪೂರ್ವ ಸೂಚನೆ ನೀಡದೇ ಸ್ಥಳೀಯ ವಾಹನಗಳಿಗೂ (ಕೆಎ 20) ಟೋಲ್ ಸಂಗ್ರಹ ಆರಂಭಿಸಿದ ನವಯುಗ ಕಂಪೆನಿ ವಿರುದ್ಧ ಎರಡೂ ಕಡೆಗಳಲ್ಲಿ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆ ಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು.

ಉಡುಪಿ ಜಿಲ್ಲಾ ನೊಂದಣಿಯ ವಾಹನಗಳಿಗೆ ಈಗಿರುವಂತೆ ಯಾವುದೇ ಟೋಲ್ ಪಡೆಯದೇ ಇರುವ ಸ್ಥಿತಿ ಸೆಪ್ಟಂಬರ್ ಕೊನೆಯವರೆಗೆ ಮುಂದುವರಿ ಯಲಿದ್ದು, ಮುಂದಿನ ಕ್ರಮದ ಕುರಿತು ಅಕ್ಟೋಬರ್ ತಿಂಗಳಲ್ಲಿ ಹೋರಾಟ ಗಾರರು ಹಾಗೂ ಜನಪ್ರತಿನಿಧಿಗಳ ಇನ್ನೊಂದು ಸಭೆಯನ್ನು ಕರೆದು ನಿರ್ಧರಿಸಲು ಸಭೆ ತೀರ್ಮಾನಿಸಿತು ಎಂದು ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.

ಇಂದಿನ ಸಭೆಯಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್‌ನಲ್ಲಿ ವಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಭಾಗವಹಿಸಿದ್ದು, ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುವ ಪ್ರಯತ್ನವನ್ನು ಖಂಡಿಸಿ, ಚತುಷ್ಪಥ ಕಾಮಗಾರಿಯನ್ನೇ ಇನ್ನೂ ಪೂರ್ಣ ಗೊಳಿಸದೇ ಹೆದ್ದಾರಿಯಲ್ಲಿ ಸಂಚಾರ ದು:ಸ್ವಪ್ನವಾಗುವಂತೆ ಮಾಡಿದ ಕಂಪೆನಿಯ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು ಎಂದರು.

ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯಾವುದೇ ಅಧಿಕಾರಿ ಉಪಸ್ಥಿತರಿರಲಿಲ್ಲ. ಕಾಮಗಾರಿಯ ಗುತ್ತಿಗೆದಾರರಾದ ನವಯುಗ ಕಂಪೆನಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಜನಪ್ರತಿನಿಧಿ ಗಳು ಜಿಲ್ಲೆಯ ಜನರ ಪರವಾಗಿ ವಾದಿಸಿದರು ಎಂದು ಪ್ರತಾಪ್ ಶೆಟ್ಟಿ ನುಡಿದರು. ಮುಂದೆ ಅಕ್ಟೋರ್ ತಿಂಗಳ ಆರಂಭದಲ್ಲಿ ಎಲ್ಲರ ಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿಧರಿರ್ಸಲಾಯಿತು ಎಂದವರು ತಿಳಿಸಿದರು.

ನವಯುಗ ಕಂಪೆನಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡದಿದ್ದರೆ ಪೋಲಿಸ್ ಅಲ್ಲ, ಮಿಲಿಟರಿ ಬಂದರೂ ಯಾವುದೇ ವಾಹನದಿಂದ ಒಂದು ರೂ. ಟೋಲ್ ಸಂಗ್ರಹಿಸಲು ಬಿಡುವುದಿಲ್ಲ. ಈ ಕುರಿತು ನಾಗರಿಕರು ಎರಡೂ ಕಡೆಗಳಲ್ಲಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದು ಶಾಸಕರೆಲ್ಲರೂ ಸ್ಪಷ್ಟವಾಗಿ ಕಂಪೆನಿಗೆ ತಿಳಿಸಿದರು ಎಂದೂ ಪ್ರತಾಪ್ ಶೆಟ್ಟಿ ಹೇಳಿದರು.

ಹೆಜಮಾಡಿ ಟೋಲ್‌ಗೇಟಿನಲ್ಲಿ ನವಯುಗ ಕಂಪನಿ ಸಿಬ್ಬಂದಿಗಳ ಮೇಲೆ ಪ್ರತಿದಿನ ಆರೋಪಗಳು ಕೇಳಿ ಬರುತ್ತಿವೆ. ತಾವು ವಹಿಸಿಕೊಂಡ ಕಾಮಗಾರಿ ಇನ್ನೂ ಪೂರ್ಣಗೊಳಿಸದೆ ಕೇವಲ ಟೋಲ್ ಹಣ ಪಡೆದು ಸಾರ್ವಜನಿಕರಿಂದ ಹಣ ಸಂಪಾದಿಸುತ್ತಿರುವ ಸಿಬ್ಬಂದಿಗಳ ವಿರುದ್ಧ ಶಾಸಕರು ಕೆಂಡಕಾರಿದರು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕುಂದಾಪುರ ಉಪವಿಭಾಗಾಧಿಕಾರಿ ಟಿ.ಭೂಬಾಲನ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News