ಕೃಷಿ ಕೇವಲ ಸಂಸ್ಕೃತಿ ಅಲ್ಲ; ಅದು ವ್ಯವಹಾರವೂ ಹೌದು: -ಡಾ.ಚಂದ್ರಶೇಖರ್

Update: 2018-08-18 17:09 GMT

ನಿಟ್ಟೆ, ಆ.18: ಕೃಷಿ ಎಂಬುದು ದೇಶದ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಭಾರತ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಈ ಪ್ರಗತಿಯ ಹೊರತಾಗಿಯೂ ಭಾರತ ಈ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಹಾಗೂ ಸವಾಲು ಗಳನ್ನು ಎದುರಿಸುತ್ತಿದೆ. ಹೀಗಾಗಿ ಕೃಷಿ ಎಂಬುದು ಕೇವಲ ಸಂಸ್ಕೃತಿ ಅಲ್ಲ. ಅದೊಂದು ವ್ಯಾಪಾರವೂ ಆಗಿದೆ ಎಂದು ಜೈಪುರದ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ (ಎನ್‌ಐಎಎಂ) ಮಹಾ ನಿರ್ದೇಶಕ ಡಾ.ಪಿ.ಚಂದ್ರಶೇಖರ್ ಹೇಳಿದ್ದಾರೆ.

ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಜೈಪುರದ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್‌ನ ಸಹಯೋಗದೊಂದಿಗೆ ಆಯೋಜಿಸಿದ ‘ನಿಟ್ಟೆ ಕೃಷಿಯೋದ್ಯಮಿಗಳ ಸಮಾವೇಶ -2018’ವನ್ನು ಜೆಕೆಎಸ್‌ಎಚ್‌ಐಎಂ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಹಲವು ಸಮಸ್ಯೆಗಳ ಮಧ್ಯೆಯೂ ಕೃಷಿ ಎಂಬುದು ಕೋಟ್ಯಾಂತರ ಮಂದಿಗೆ ಆಹಾರದ ಮೂಲವಾಗಿದೆ. ಇಂದು ಕೃಷಿಯೋದ್ಯಮ ಎಂಬುದು ಒಂದು ವೃತ್ತಿಯಾಗಿದ್ದು, ಜೀವನಕ್ರಮವಾಗಿಯೂ ಪ್ರಚಲಿತದಲ್ಲಿದೆ. ಸಂಸ್ಕರಣೆ ಹಾಗೂ ಮಾರ್ಕೆಟಿಂಗ್ ಎಂಬುದು ಕೃಷಿಯೋದ್ಯಮದ ಎರಡು ಮೂಲಸ್ತಂಭ ಗಳಾಗಿವೆ. ಈ ಪ್ರಕ್ರಿಯೆ ಪ್ರತಿ ಹಂತದಲ್ಲೂ ಅದು ವೌಲ್ಯವನ್ನು ಹೆಚ್ಚಿಸುತ್ತಿದೆ ಎಂದವರು ನುಡಿದರು.

ಯಶಸ್ಸಿಗೆ ಸೂತ್ರಗಳು: ಕೃಷಿಯಲ್ಲಿ ಯಶಸ್ಸಿಗೆ ಕೆಲವು ಸೂತ್ರಗಳಿವೆ. ಮೊದಲ ನೇಯದಾಗಿ ಕೃಷಿಯನ್ನು ರೈತನೊಬ್ಬನ ವೈಯಕ್ತಿಕ ಚಟುವಟಿಕೆ ಎಂದು ಪರಿಗಣಿಸದೇ ಅದನ್ನೊಂದು ಗುಂಪು ಆಧಾರಿತ ಚಟುವಟಿಕೆಯಾಗಿ ಪರಿಗಣಿ ಸಬೇಕಾಗಿದೆ. ಕೃಷಿಯನ್ನು ವೈಯಕ್ತಿಕವಾಗಿ ಪರಿಗಣಿಸಿದರೆ ಅದೊಂದು ಖಚಿತ ಗೆಲುವೇ ಸಿಗದ ವೃತ್ತಿಯಾಗಿದೆ ಎಂದು ಡಾ.ಪಿ.ಚಂದ್ರಶೇಖರ್ ಅಭಿಪ್ರಾಯ ಪಟ್ಟರು.

ಕೃಷಿ ಎಂಬುದು ಕೇವಲ ಸಂಸ್ಕೃತಿಯಲ್ಲ. ಅದೊಂದು ವ್ಯವಹಾರವೂ ಆಗಿದೆ. ಕೃಷಿಯಲ್ಲಿ ಸಂಸ್ಕರಣೆ ಹಾಗೂ ಮಾರ್ಕೆಟಿಂಗ್‌ನ್ನು ಮಾಹಿತಿ ತಂತ್ರಜ್ಞಾನ (ಐಟಿ) ವನ್ನು ಬಳಸಿ ಯಶಸ್ಸಿನತ್ತ ಒಯ್ಯಬೇಕಿದೆ. ಆದರೆ ದುರದೃಷ್ಟವಶಾತ್ ಪ್ರತಿವರ್ಷ ದೇಶದಲ್ಲಿ ಸರಾಸರಿ 2049 ಮಂದಿ ರೈತರು ಕೃಷಿ ಕ್ಷೇತ್ರಕ್ಕೆ ವಿದಾಯ ಹೇಳುತಿ ದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೃಷಿ ಚಟುವಟಿಕೆ ಎಂಬುದು ನಷ್ಟದ ಬಾಬ್ತು ಆಗಿರುವುದಾಗಿದೆ ಎಂದವರು ನುಡಿದರು.

ಕೃಷಿಯೋದ್ಯಮ ಎಂಬುದು ರೈತನೊಬ್ಬ ಏನನ್ನು ಬೆಳೆದಿದ್ದಾನೆ ಎಂಬುದಲ್ಲ. ಮಾರುಕಟ್ಟೆ ಏನನ್ನು ಬಯಸುತ್ತಿದೆ ಎಂಬುದು. ಮಾರುಕಟ್ಟೆಗೆ ಏನು ಬೇಕು ಎಂಬುದನ್ನು ಅರಿತು ಅದನ್ನು ಬೆಳೆಯುವುದೇ ಕೃಷಿಯೋದ್ಯಮ ಎಂದು ಡಾ.ಚಂದ್ರಶೇಖರ್ ತಿಳಿಸಿದರು.

ಜೆಕೆಎಸ್‌ಎಚ್‌ಐಎಂನ ನಿರ್ದೇಶಕ ಡಾ.ಕೆ.ಶಂಕರನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಗೋಲ್ಡ್ ಫಾರ್ಮ್‌ನ ಸಹ ಸ್ಥಾಪಕ ಡಾ.ಅಭಿಲಾಷ್ ತಿರುಪತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃಷಿಯೋದ್ಯಮದಲ್ಲಿ ತನ್ನ ಅನುಭವವನ್ನು ಹಂಚಿಕೊಂಡರು.

ಸಂಸ್ಥೆಯ ಕಾರ್ಪೋರೇಟ್ ಪ್ರೋಗ್ರಾಮ್‌ನ ಡೀನ್ ಡಾ.ಎ.ಪಿ.ಆಚಾರ್ ಅತಿಥಿಗಳನ್ನು ಸ್ವಾಗತಿಸಿ, ಸಮಾವೇಶದ ಕುರಿತು ವಿವರಿಸಿದರು. ಡಾ.ಸುಧೀರ್‌ರಾಜ್ ಕೆ. ಕಾರ್ಯಕ್ರಮವನ್ನು ಸಂಯೋಜಿಸಿದರೆ, ಮೋನಿಷಾ ಮತ್ತು ಯಶಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News