ದೈವಗಳ ನುಡಿಗಳಲ್ಲಿ ತುಳು ಭಾಷೆಯ ಪರಿಣಾಮಕಾರಿ ಸಂವಹನದ ಸಾಧ್ಯತೆಗಳಿವೆ: ಡಾ.ಬಿ.ಎ.ವಿವೇಕ ರೈ

Update: 2018-08-18 17:15 GMT

ಮಂಗಳೂರು, ಆ.18:ತುಳು ಭಾಷೆಯ ಪರಿಣಾಮಕಾರಿ ಸಂವಹನದ ಸಾಧ್ಯತೆಯ ಮಾದರಿಯನ್ನು ತುಳು ಸಂಸ್ಕೃತಿಯ ನ್ನು ದೈವದ ನುಡಿಗಳ ಮೂಲಕ ತೋರಿಸಿಕೊಟ್ಟವರು ತುಳು ನಾಡಿನ ದೈವಾರಾಧಕರು ಎಂದು ತುಳು ವಿದ್ವಾಂಸ ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.

ನಗರದ ಪುರಭವನದಲ್ಲಿಂದು ಪಾವಂಜೆ ಅಗೋಳಿ ಮಂಜಣ್ಣ ಜಾನಪದ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡ ಡಾ.ಗಣೇಶ್ ಅಮೀನ್ ಸಂಕಮಾರ್‌ರವರ ಸಾವಿರದ ಸತ್ಯಗಳು ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ದ್ರಾವಿಡ ಮೂಲದ ತುಳು ಸಂಸ್ಕೃತಿಯ ನ್ನು ಸಂಧಿ,ಪಾಡ್ದಾನ,ಪಾರಿ,ಮಧು,ಮದಿಪುಗಳ ಮೂಲಕ ತುಳುನಾಡಿನ ದೈವಾರಾಧಕರು,ದೈವದ ಪಾತ್ರಿಗಳನ್ನೊಳಗೊಂಡ ಅಕ್ಷರ ಜ್ಞಾನ ವಿಲ್ಲದ ಜನಸಾಮಾನ್ಯರು ಪರಿಣಾಮಕಾರಿಯಾಗಿ ತೆರೆದಿಡುತ್ತಾರೆ. ಅವರ ‘ನುಡಿ’ಗಳಲ್ಲಿ ತುಳು ಭಾಷೆಯ ಶಕ್ತಿಯ ಪರಿಚಯವಾಗುತ್ತದೆ. ತುಳುನಾಡಿನ ಜನಸಾಮಾನ್ಯರ ನಡುವಿನ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯವಿದೆ.ಅವರ (ಮಾತುಗಳಲ್ಲಿ )ನುಡಿಗಳಲ್ಲಿ ಅಭಯವಿದೆ, ಸಾಂತ್ವಾನವಿದೆ, ವಿಶ್ವಾಸವಿದೆ, ಹಿರಿಯನ್ನು ಗೌರವಿಸುವ ರೀತಿ ನೀತಿಗಳಿವೆ. ಸಮುದಾಯದ ಮೇಲಿನ ಪ್ರೀತಿ ಇದೆ. ಪ್ರಾಮಾಣಿಕತೆಯಿದೆ. ಈ ಹಿನ್ನೆಲೆಯಲ್ಲಿ ಅವರ ನುಡಿಗಳು ದೈವದ ನುಡಿಗಳಾಗಿವೆ. ಸತ್ಯದ ನುಡಿಗಳಾಗಿವೆ ಅವುಗಳಲ್ಲಿ ಮಾಂತ್ರಿಕ ಶಕ್ತಿ ಇದೆ ಎಂದು ಜನ ನಂಬುತ್ತಾರೆ ಎಂದು ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.

ನುಡಿ ಕಲುಷಿತ ಗೊಳ್ಳಬಾರದು :- ದೈವಗಳ ಆರಾಧನೆಯ ಜೊತೆ ಬೆಳೆದು ಬಂದ ದೈವದ ನುಡಿಗಳು ತುಳುನಾಡಿನ ಸಂಸ್ಕೃತಿಯಲ್ಲಿ ಸತ್ಯದ ಸಂಸ್ಕೃತಿ ಯನ್ನು ಪ್ರತಿಬಿಂಬಿಸುತ್ತದೆ.ಆದರೆ ಆ ಮಾತುಗಳನ್ನು ಆಡುವವರು ಸಮಾಜದ ಶಾಂತಿಯನ್ನು ನೆಮ್ಮದಿಯನ್ನು ಕದಡುವವರು, ಹಿಂಸೆಯನ್ನು, ಕೊಲೆಯನ್ನು ಪ್ರಚೋಧಿಸುವಂತವರಾಗಿದ್ದಾರೆ. ಅವರೇ ದೈವದ ನುಡಿ ಹೇಳುವವರಾಗಿದ್ದರೆ ಆಗ ನುಡಿ ಕಲುಷಿತಗೊಳ್ಳುತ್ತದೆ ಎಂದು ವಿವೇಕ ರೈ ತಿಳಿಸಿದ್ದಾರೆ.

ಸಂವಿಧಾನದ ಏಳನೆ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಬೇಕು ಎನ್ನುವ ಈ ಸಂದರ್ಭದಲ್ಲಿ ತುಳು ಭಾಷೆಯ ಶಕ್ತಿಯುತ ಸಂವಹನದ ಸಾಧ್ಯತೆಗಳ ನೆಲೆ ಎಲ್ಲಿದೆ ಎನ್ನುವುದನ್ನು ತಿಳಿದುಕೊಂಡು ಅವುಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ವಿವೇಕ ರೈ ತಿಳಿಸಿದ್ದಾರೆ.

ಗಣೇಶ್ ಅಮೀನ್ ಸಂಕಮಾರ್ ತುಳುನಾಡಿನ ಸುಮಾರು 35 ದೈವಗಳ ನುಡಿಗಳನ್ನು ತಮ್ಮ ಸಾವಿರದ ಸತ್ಯಗಳು ಕೃತಿಯ ಮೂಲಕ ಸಂಗ್ರಹಿಸಿದ್ದಾರೆ. ಈ ನುಡಿಗಳು ತುಳು ಭಾಷೆಯ ಅನಂತ ಸಾಧ್ಯತೆಗಳನ್ನು ತೆರೆದಿಡುತ್ತವೆ ಎಂದು ವಿವೇಕ ರೈ ತಿಳಿಸಿದ್ದಾರೆ.

ತುಳು ನಾಡಿನ ಆಚರಣೆಗಳ ದೈವ ದೇವರ ಆಚರಣೆಗಳಲ್ಲಿಡಗಿದೆ. ಅವುಗಳನ್ನು ತುಳುವರು ತಮ್ಮ ಧರ್ಮ ವೆಂದು ತಿಳಿದಿದ್ದಾರೆ. ಸತ್ಯ -ಧರ್ಮವೆ ನ್ಯಾಯಯುತವಾದ ಬದುಕೆಂದು ತುಳುವರು ನಂಬಿದ್ದಾರೆ. ತುಳು ನಾಡಿನ ದೈವ ನರ್ತಕರಾದ ನಲ್ಕೆ,ಪರವ,ಪಂಬದರು ಈ ದೈವರಾಧನೆಯ ಸಂಸ್ಕೃತಿಯನ್ನು ದೈವಾರಾಧಕರ ನಂಬಿಕೆಯೊಂದಿಗೆ ಆರಾಧನೆಯೊಂದಿಗೆ ಉಳಿಸಿಕೊಂಡು ಆಚರಿಸಿಕೊಂಡು ಬಂದಿದ್ದಾರೆ ಇಂತಹ ಮಾಹಿತಿಗಳನ್ನು ಒಳಗೊಂಡು ಕೃತಿ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿಯೆಂದು ಸಮಾರಂಭದ ಅಧ್ಯಕ್ಷತೆವಹಿಸಿದ್ದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವಾ ತಿಳಿಸಿದ್ದಾರೆ.

ಸಮಾರಂಭದಲ್ಲಿ ಸೈಂಟ್ ಅಲೊಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಡೇನಿಶಿಯಸ್ ವಾಸ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕುವೈಟ್ ಬಿಲ್ಲವ ಸಂಘದ ಅಧ್ಯಕ್ಷ ರಘು ಸಿ.ಪೂಜಾರಿ, ಪಾವಂಜೆ ಅಗೋಳಿ ಮಂಜಣ್ಣ ಅಧ್ಯಯನ ಕೇಂದ್ರದ ಅಧ್ಯಕ್ಷ ಚಂದ್ರ ಶೇಖರ ನಾನಿಲ್, ಅಖಿಲ ಭಾರತ ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ, ತುಳು ಒಕ್ಕೂಟದ ಅಧ್ಯಕ್ಷ ಡಾ.ದಾಮೋದರ ನಿಸರ್ಗ, ಬಿಲ್ಲವ ಯುವ ವಾಹಿನಿಯ ಅಧ್ಯಕ್ಷ ಜಯಂತ ನಡು ಬೈಲು ,ಖಂಡಿಗ ಆಲಡೆಯ ಮುಕಾಲ್ದಿ ಆದಿತ್ಯ,ಹಾಗೂ ಅತಿಥಿಗಳಾಗಿ ಪದ್ಮ ನಾಭ ಕೋಟ್ಯಾನ್, ಚಿತ್ತರಂಜನ್, ಕುಸುಮ ಮಹಾಬಲ ಪೂಜಾರಿ, ಮಧುಕರ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಕೃತಿ ರಚಿಸಿದ ಡಾ.ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ ವಂದಿಸಿದರು.ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ದೈವದ ಪಾತ್ರಿ ಭಾಸ್ಕರ ಬಂಗೇರ ಗಂಧ ಕಾಡು ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News