ರಾಜಸ್ಥಾನದಲ್ಲಿ 42 ಲಕ್ಷ ನಕಲಿ ಮತದಾರರು: ಕಾಂಗ್ರೆಸ್ ಆರೋಪ

Update: 2018-08-18 17:21 GMT

ಜೈಪುರ,ಆ.18: ರಾಜಸ್ಥಾನದಲ್ಲಿ 42 ಲಕ್ಷ ನಕಲಿ ಮತದಾರರಿದ್ದಾರೆ ಎಂದು ಸಮೀಕ್ಷೆಯೊಂದರ ವರದಿಯನ್ನು ಆಧಾರಿಸಿ ಕಾಂಗ್ರೆಸ್ ಆರೋಪಿಸಿದೆ. ತಮ್ಮನ್ನು ಭಾರತದ ಪ್ರಥಮ ತಾಂತ್ರಿಕ ರಾಜಕೀಯ ಸ್ಟಾರ್ಟ್‌ಅಪ್ ಎಂದು ಹೇಳಿಕೊಂಡಿರುವ ದಿಪಾಲಿಟಿಕ್ಸ್.ಇನ್ ಈ ಸಮೀಕ್ಷೆಯನ್ನು ಕಾಂಗ್ರೆಸ್‌ಗಾಗಿ ನಡೆಸಿದೆ. ರಾಜಸ್ಥಾನದ ಸಿಕರ್‌ನ ರಾಮಗಡ್ ವಿಧಾನಸಭಾ ಕ್ಷೇತ್ರದಲ್ಲಿರುವ ಮತಗಟ್ಟೆ ಸಂಖ್ಯೆ 75ರಲ್ಲಿ ಮನೆ ಸಂಖ್ಯೆ 1312ರಲ್ಲಿ 646 ನೋಂದಾಯಿತ ಮತದಾರರಿದ್ದಾರೆ. ಇನ್ನು ಗಗನ್‌ನಗರದ ಸಾದುಲ್‌ಶಹರ್ ಕ್ಷೇತ್ರದಲ್ಲಿ ಕನಿಷ್ಟ 84 ಜನರ ಹೆಸರು ಅಂಗ್ರೇಝ್ ಸಿಂಗ್ ಎಂದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ಕಳುಹಿಸಲಾಗಿದೆ ಎಂದು ಪಕ್ಷ ತಿಳಿಸಿದೆ.

ಒಂದೇ ಹೆಸರು, ಸಂಬಂಧಿತರ ಹೆಸರು ಮತ್ತು ಲಿಂಗ ಇತ್ಯಾದಿಗಳನ್ನು ಒಳಗೊಂಡಿರುವ ಒಟ್ಟಾರೆ 42,08,841 ನಕಲಿ ಮತದಾರರಿರುವ ಸಾಧ್ಯತೆಯಿದೆ. ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಹೊಂದಿರುವ 91,261 ದಾಖಲೆಗಳು ದೊರಕಿವೆ. ಇನ್ನು ಒಂದೇ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಬಾರಿ ಒಂದೇ ಹೆಸರು, ಸಂಬಂಧಿಕರ ಹೆಸರು ಮತ್ತು ಲಿಂಗ ಪುನಾರಾವರ್ತನೆಯಾಗಿರುವ 14,282 ದಾಖಲೆಗಳು ದೊರೆತಿವೆ ಎಂದು ವರದಿ ತಿಳಿಸಿದೆ.

ರಾಜ್ಯದಲ್ಲಿರುವ ಒಟ್ಟು 4,75,04,699 ಮತದಾರರ ಪೈಕಿ ಶೇ.10 ನಕಲಿಯಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News