ಜೋಡುಪಾಲ ನಿರಾಶ್ರಿತರಿಗೆ ಆಶ್ರಯ: ಸಚಿವ ಖಾದರ್ ಮೇಲ್ವಿಚಾರಣೆ

Update: 2018-08-18 17:21 GMT

ಮಂಗಳೂರು, ಆ.18: ಜೋಡುಪಾಲ ದುರಂತದ ಸಂತ್ರಸ್ತರು ಆಶ್ರಯ ಪಡೆದಿರುವ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಶನಿವಾರ ದಿನವಿಡೀ ಮೇಲ್ವಿಚಾರಣೆ ನಡೆಸಿದರು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಎಸ್ಪಿ ರವಿಕಾಂತೇಗೌಡ ಅವರೊಂದಿಗೆ ಸ್ಥಳದಲ್ಲಿಯೇ ಇದ್ದು, ಪರಿಹಾರ ಕ್ರಮಗಳ ಪರಿಶೀಲಿಸಿದರು. ಈಗಾಗಲೇ ಜೋಡುಪಾಲ ವ್ಯಾಪ್ತಿಯ ಬಹುತೇಕ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಆ.19ರಂದು ಹೆಲಿಕಾಪ್ಟರ್ ಮೂಲಕ ಪರಿಶೋಧಿಸಿ, ಬೆಟ್ಟದಲ್ಲಿ ಇನ್ನೂ ಯಾರಾದರೂ ಇದ್ದಾರಾ ಎಂದು ಶೋಧಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಸಂತ್ರಸ್ತರೊಂದಿಗೆ ಸಚಿವರು ಸಮಾಲೋಚನೆ ನಡೆಸಿದ್ದು, ಒದಗಿಸಿರುವ ವ್ಯವಸ್ಥೆಗಳ ಬಗ್ಗೆ ಸಂತ್ರಸ್ತರು ತೃಪ್ತಿ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ತಂಡವು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಸಂತ್ರಸ್ತರಿಗೆ ಸೂಕ್ತ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿದೆ. ಸಂತ್ರಸ್ತರಿಗೆ ಮಾನಸಿಕ ಸ್ಥೈರ್ಯ ಮೂಡಿಸಲು ರವಿವಾರ ಮನೋವೈದ್ಯ ರಿಂದ ಕೌನ್ಸಿಲಿಂಗ್ ಏರ್ಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜೋಡುಪಾಲ: ಸಾರ್ವಜನಿಕ ಮುಕ್ತ ಪ್ರವೇಶಕ್ಕೆ ತಡೆ

ಜೋಡುಪಾಲ ದುರಂತ ಸ್ಥಳಕ್ಕೆ ವೀಕ್ಷಣೆಗೆಂದು ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇದರಿಂದ ಪರಿಹಾರ ಕಾರ್ಯಾಚರಣೆಗೆ ಅಡಚಣೆಯಾಗುತ್ತಿರುವುದರಿಂದ ಘಟನಾ ಸ್ಥಳಕ್ಕೆ ಸಾರ್ವಜನಿಕರ ಮುಕ್ತ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಸಂತ್ರಸ್ತರು ಆಶ್ರಯ ಪಡೆದಿರುವ ಕೇಂದ್ರಗಳಿಗೂ ಸಾರ್ವಜನಿಕರು ವೀಕ್ಷಣೆಗೆಂದು ಬರುತ್ತಿದ್ದು, ಇದರಿಂದ ಸಂತ್ರಸ್ತರ ನೆಮ್ಮದಿಗೂ ಭಂಗ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಹಾರ ಕಾರ್ಯಕರ್ತರಿಗೆ ಪಾಸು ನೀಡಲಾಗುವುದು. ಸರಕಾರಿ ನೌಕರರು ಹಾಗೂ ಪಾಸು ಹೊಂದಿದವರಿಗೆ ಮಾತ್ರ ಸ್ಥಳಕ್ಕೆ ಪ್ರವೇಶ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News