ಗಾಂಜಾ ಮಾರಾಟಕ್ಕೆ ಯತ್ನ: ಮೂವರ ಬಂಧನ

Update: 2018-08-18 17:34 GMT

ಮಂಗಳೂರು, ಆ.18: ನಗರದ ಲಾಲ್‌ಭಾಗ್ ಜಂಕ್ಷನ್‌ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಆರ್ಥಿಕ ಮತ್ತು ನಾರ್ಕೊಟಿಕ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ನಿವಾಸಿಗಳಾದ ರಫೀಕ್ (30), ಸೈಯದ್ ಶಫೀದ್ (30), ಮಲ್ಲಿಕಾರ್ಜುನ (30) ಬಂಧಿತ ಆರೋಪಿಗಳು.

ಆ.18ರಂದು ನಗರದ ಲಾಲ್ಭಾಗ್ ಜಂಕ್ಷನ್‌ನ ಬಸ್ ನಿಲ್ದಾಣದ ಬಳಿ ಮೂವರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ 3.5 ಕೆ.ಜಿ. ತೂಕದ 46 ಸಾವಿರ ರೂ. ಮೌಲ್ಯದ ಗಾಂಜಾ, 12 ಸಾವಿರ ರೂ. ಮೌಲ್ಯದ ಮೂರು ಮೊಬೈಲ್ ಫೋನ್‌ಗಳು ಹಾಗೂ 550 ರೂ. ನಗದು ಸೇರಿ 58,550 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್ ಆಯುಕ್ತ ಟಿ.ಸುರೇಶ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹನುಮಂತರಾಯ ನಿರ್ದೇಶನದಂತೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರೀಫ್, ಪೊಲೀಸ್ ಉಪನಿರೀಕ್ಷಕಿ ಮಂಜುಳಾ ಮತ್ತು ಸಿಬ್ಬಂದಿ ಲಕ್ಷ್ಮೀಶ್, ಜಗದೀಶ್, ಶಾಜು ನಾಯರ್, ಕಿಶೋರ್ ಪೂಜಾರಿ ಹಾಗೂ ಭಾಸ್ಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಕುರಿತು ಇಕೊನಾಮಿಕ್ ಮತ್ತು ನಾರ್ಕೊಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News