ಚಾರ್ಮಾಡಿ ಘಾಟ್ ರಸ್ತೆಯಲ್ಲಿ ನಿರಂತರ ಟ್ರಾಫಿಕ್ ಜಾಮ್

Update: 2018-08-18 17:42 GMT

ಬೆಳ್ತಂಗಡಿ, ಆ. 18: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಶುಕ್ರವಾರ ರಾತ್ರಿಯಿಂಡೀ ಟ್ರಾಫಿಕ್ ಜಾಮ್ ಆಗಿತ್ತು ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ಗಳು ಬೆಳಗ್ಗಿನ ಜಾವದ ವರೆಗೂ ಕಾದು ಬಳಿಕ ತೆರಳಬೇಕಾಯಿತು. ಸಂಜೆಯೇ ಘಾಟಿಯಲ್ಲಿ ಸಿಲುಕಿಕೊಂಡ ಬಸ್‌ಗಳಲ್ಲಿದ್ದವರು ಆಹಾರಕ್ಕಾಗಿಯೂ ರದಾಡುವಂತಾಯಿತು. ಸ್ಥ ಳೀಯ ಯುವಕರು ಸಿಲುಕಿಕೊಂಡ ಹಲವರಿಗೆ ತುರ್ತು ಆಹಾರವನ್ನು ವಿತರಿಸುವ ಕಾರ್ಯವನ್ನು ಮಾಡಿದರು. ಬೆಳಗ್ಗಿನ ವೇಳೆಗೆ ಸಿಲುಕಿಕೊಂಡಿದ್ದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು. ಘಾಟಿಯಲ್ಲಿ ಸಿಲುಕಿಕೊಂಡಿದ್ದ ಟೆನ್ ವೀಲ್ ಲಾರಿಯನ್ನು  ಪೋಲೀಸರು ಸ್ಥಳೀಯ ಸಹಕಾರದೊಂದಿಗೆ ತೆರವುಗೊಳಿಸಿದರು. ಬಳಿಕ ಸುಗಮ ಸಂಚಾರ ಸಾಧ್ಯವಾಯಿತು.

ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ಮತ್ತೆ ಘಾಟಿಯಲ್ಲಿ ಒಂದು ಗಂಟೆಯ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆ ಬಳಿಕ ನಿಧಾನವಾಗಿ ವಾಹನಗಳು ಸಂಚರಿಸುತ್ತಿದೆ. ಹಗಲು ಹೊತ್ತಿನಲ್ಲಿಯೂ ಘಾಟಿಯಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದು ಆಗಾಗ ಟ್ರಾಫಿಕ್ ಬ್ಲಾಕ್ ಆಗುತ್ತಿತ್ತು. ಘಾಟಿಯ ಕೆಳಗೆ ಚಾರ್ಮಾಡಿಯಲ್ಲಿ ಘನ ವಾಹನಗಳನ್ನು ತಡೆಯಲಾಗುತ್ತಿದ್ದು ಬಸ್ ಹಾಗೂ ಸಣ್ಣ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ಆದರೆ ಕೊಟ್ಟಿಗೆ ಹಾರದಿಂದ ಯಾವುದೇ ಅಡೆತಡೆಯಿಲ್ಲದೆ ಘನವಾಹನಗಳನ್ನು ಬಿಡಲಾಗುತ್ತಿದ್ದು ಇದು ಸಮಸ್ಯೆ ಸೃಷ್ಟಿಸುತ್ತಿದೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ರಾತ್ರಿಯಾದೊಡನೆಯೇ ಖಾಸಗಿ ಬಸ್ಸುಗಳು ಘಾಟಿಯನ್ನು ಆಕ್ರಮಿಸಿಕೊಳ್ಳುತ್ತಿದ್ದು ವಾಹನಸಂಚಾರಕ್ಕೆ ತಡೆಯಾಗುತ್ತಿದೆ. ರಾಜ್ಯ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದು ಎಲ್ಲ ರೀತಿಯ ಖಾಸಗಿ ಬಸ್ಸುಗಳೂ ಈ ಮಾರ್ಗವಾಗಿ ಸಂಚರಿಸುತ್ತಿವೆ.

ಸಾಧ್ಯವಾದಷ್ಟು ಖಾಸಗಿ ವಾಹನಗಳು ರಾತ್ರಿಯ ವೇಳೆ ಚಾರ್ಮಾಡಿ ಘಾಟಿಯ ಮೂಲಕದ ಸಂಚಾರವನ್ನು ಕೈಬಿಡುವುದು ಉತ್ತಮವಾಗಿದೆ. ಸ್ಥಳೀಯರು ರಾತ್ರಿ ವೇಳೆ ಘಾಟಿಯಲ್ಲಿದ್ದು ಸಿಲುಕಿಕೊಂಡವರಿಗೆ ನೆರವಾಗುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇದೀಗ ಘನ ವಾಹನಗಳನ್ನು ತಡೆದು ಚಿಕ್ಕಮಗಳೂರು ಜಿಲ್ಲಾಧಿಕಾರಿಯವರೂ ಇಂದು ಸಂಜೆ ಆದೇಶ ಹೊರಡಿಸಿದ್ದು ಇಂದು ರಾತ್ರಿಯಿಂದ ಕೊಟ್ಟಿಗೆ ಹಾರದಲ್ಲಿಯೂ ಘನ ವಾಹನಗಳನ್ನು ತಡೆಯಲಾಗುತ್ತಿದೆ ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿಯವರ ಆದೇಶದಂತೆ ಚಾರ್ಮಾಡಿ ಘಾಟಿಯ ಮೂಲಕವಾಗಿ ಕೇವಲ ಪ್ರಯಾಣಿಕರ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ಯಾವುದೇ ಸರಕುಸಾಗಾಟದ ವಾಹನಗಳನ್ನು ಬಿಡಲಾಗುತ್ತಿಲ್ಲ. ವೋಲ್ವೋ ಹೊರತುಪಡಿಸಿ ಎಲ್ಲ ಬಸ್‌ಗಳ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಸರಕು ಸಾಗಾಟದ ವಾಹನಗಳನ್ನು ಉಜಿರೆ ಹಾಗೂ ಚಾರ್ಮಾಡಿಯಲ್ಲಿ ಗೇಟ್ ಹಾಕಿ ತಡೆಯಲಾಗುತ್ತಿದೆ. ಪಿಕಪ್‌ನಂತಹ ಸಣ್ಣ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ, ರಾತ್ರಿಯಿಡೀ ಘಾಟಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

- ಓಡಿಯಪ್ಪಗೌಡ, ಪಿಎಸೈ ಸಂಚಾರಿ ಠಾಣೆ ಬೆಳ್ತಂಗಡಿ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮದಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಘಾಟಿಯಲ್ಲಿ ಸಂಚಾರ ಸುಗಮವಾಗಿರಲಿ ಎಂದು ಕೇವಲ ಕರ್ನಾಟಕ ಸಾರಿಗೆಯ ಸಾಮಾನ್ಯ ಬಸ್ಸುಗಳನ್ನು ಮಾತ್ರ ಚಾರ್ಮಾಡಿ ಘಾಟಿಯ ಮೂಲಕವಾಗಿ ಓಡಿಸಲಾಗುತ್ತಿದೆ. ಜಿಲ್ಲಾಧಿಕಾರಿಯವರು ಇತರ ವಾಹನಗಳಿಗೂ ಅವಕಾಶ ನೀಡಬಹುದು ಎಂದು ತಿಳಿಸಿದ್ದು ಇಂದು ಪ್ರಾಯೋಗಿಕವಾಗಿ ಅಗತ್ಯವನ್ನು ಗಮನಿಸಿ ಎರಡು ರಾಜಹಂಸ ಬಸ್‌ಗಳನ್ನು ಚಾರ್ಮಾಡಿ ಘಾಟಿಯ ಮೂಲಕ ಬಿಡುತ್ತಿದ್ದೇವೆ, ಬೆಂಗಳೂರಿಗೆ ತಲುಪಲು 16 ರಂದ 18 ಗಂಟೆಗಳ ವರೆಗೆ ಬೇಕಾಗುತ್ತಿದ್ದು ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಗುವುದು.
- ನಾಗರಾಜ ಸಿರಾಲಿ, ಪುತ್ತೂರು ಕೆಎಸ್‌ಆರ್‌ಟಿಸಿ ಡಿ.ಸಿ

ಚಾರ್ಮಾಡಿ ಘಾಟಿಯಲ್ಲಿ ವಾಹನ ಚಾಲಕರುಗಳು ಎರಡು ವಾಹನಗಳ ನಡುವೆ ಅಂತರವಿಟ್ಟುಕೊಂಡು ಸುರಕ್ಷಿತವಾಗಿ ವಾಹನಗಳನ್ನು ಚಲಾಯಿ ಸಿದರೆ, ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಘಾಟಿಯಲ್ಲಿ ಸಂಚರಿಸುವಾಗ ಏನೇ ತೊಂದರೆ ಉಂಟಾದಲ್ಲಿ 9481266656 ಗೆ ಕರೆ ಮಾಡಬಹುದು
- ಚಾರ್ಮಾಡಿ ಹಸನಬ್ಬ. ಸಮಾಜ ಸೇವಕರು ಚಾರ್ಮಾಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News