ಸಮಗ್ರ ಹಸಿರು ನಗರ ನಿರ್ಮಾಣ ನಮ್ಮ ಧ್ಯೇಯವಾಗಲಿ: ಡಾ.ಕೆನ್ ಯಾಂಗ್

Update: 2018-08-19 09:12 GMT

ಮಂಗಳೂರು, ಆ.19: ಆರ್ಕಿಟೆಕ್ಟ್ ಗಳು ಕೇವಲ ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣಕ್ಕೆ ಸೀಮಿತವಾಗದೆ ಸಮಗ್ರ ಹಸಿರು ಹಾಗೂ ಪರಿಸರ ಸ್ನೇಹಿ ಮೂಲಭೂತ ಸೌಲಭ್ಯಗಳುಳ್ಳ ನಗರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ವಿಶ್ವವಿಖ್ಯಾತ ವಾಸ್ತುಶಿಲ್ಪಿ ಡಾ. ಕೆನ್ ಯಾಂಗ್ ಯುವ ವಾಸ್ತುಶಿಲ್ಪಿಗಳಿಗೆ ಕರೆ ನೀಡಿದ್ದಾರೆ.

ನಗರದ ಇನೋಳಿಯಲ್ಲಿರುವ ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ( ಬೀಡ್ಸ್) ಮತ್ತು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಾಜಿ(ಬಿಐಟಿ) ಯಲ್ಲಿ ಲೆಕ್ಚರ್ಸ್ ಆ್ಯಂಡ್ ಡಿಬೇಟ್ಸ್ ಕ್ಲಬ್ ರವಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 

ವಿಶ್ವಾದ್ಯಂತ ತಮ್ಮ ಕಲ್ಪನೆ ಹಾಗೂ ಯೋಜನೆಯಲ್ಲಿ ಮೂಡಿ ಬಂದಿರುವ ಕಟ್ಟಡಗಳಲ್ಲಿ ತಾವು ಅಳವಡಿಸಿರುವ ತಂತ್ರಜ್ಞಾನ ಮತ್ತು ಪರಿಸರಕ್ಕೆ ಪೂರಕವಾಗಿ ಅವುಗಳನ್ನು ನಿರ್ಮಿಸಿರುವ ಬಗ್ಗೆ ವಿವರವಾದ ಪ್ರಾತ್ಯಕ್ಷಿಕೆ ಮೂಲಕ ಡಾ.ಕೆನ್ ಉಪನ್ಯಾಸ ನೀಡಿದರು. ವಾಸ್ತುಶಿಲ್ಪಕ್ಕೆ ಪರಿಸರದ ಜೊತೆ ಅತ್ಯಂತ ನಿಕಟ ಬಾಂಧವ್ಯ ಇರುವುದು ಅಗತ್ಯ ಎಂದು ಒತ್ತಿ ಹೇಳಿದ ಡಾ.ಕೆನ್, ಒಂದು ಕಟ್ಟಡ ಅಥವಾ ನಗರದ ಯೋಜನೆ ರೂಪಿಸುವಾಗ ಅದೊಂದು 'ಮಾನವ ನಿರ್ಮಿತ ಸಮಗ್ರ ಪರಿಸರ ವ್ಯವಸ್ಥೆ'ಯಾಗಿ ರೂಪುಗೊಳ್ಳುವಂತೆ ಖಾತರಿಪಡಿಸಬೇಕು. ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣದಲ್ಲಿ ಸಾಮಾನ್ಯಕ್ಕಿಂತ 6.3 ಶೇ. ಹೆಚ್ಚು ವೆಚ್ಚವಾಗುತ್ತದೆ. ಆದರೆ ಇಂತಹ ನಿರ್ಮಾಣದಿಂದ ಉಳಿತಾಯವಾಗುವ ನೀರು ಹಾಗೂ ವಿದ್ಯುತ್ ನಿಂದ ಕೇವಲ 8 ವರ್ಷದೊಳಗೆ ಆ ಹಣ ನಮಗೆ ವಾಪಸ್ ಬರುತ್ತದೆ. ಇದನ್ನು ವಾಸ್ತುಶಿಲ್ಪಿಗಳು, ಬಿಲ್ಡರ್ ಗಳು ಮತ್ತು ಜನರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.  

"ವಾಸ್ತುಶಿಲ್ಪದಲ್ಲಿ ಗಾಢವಾದ ಆಸಕ್ತಿ, ಆ ವೃತ್ತಿಯಲ್ಲಿ ಎದುರಿಸಬೇಕಾದ ಭಾರೀ ಒತ್ತಡ, ಅಷ್ಟೇ ತಾಳ್ಮೆ, ಕಠಿಣ ಪರಿಶ್ರಮ ಮಾಡುವ ಮನಸ್ಸು ಹಾಗೂ ಶ್ರೇಷ್ಠ ಫಲಿತಾಂಶ ನೀಡಲು ಸತತ ಪ್ರಯತ್ನ ಮಾಡುವ ಛಲ - ಇವಿಷ್ಟು ಗುಣಗಳು ಒಬ್ಬ ಯಶಸ್ವಿ ವಾಸ್ತುಶಿಲ್ಪಿ ಆಗಲು ಬೇಕೇ ಬೇಕು. ಸುಮ್ಮನೆ ಈ ವೃತ್ತಿಗೆ ಬರಬೇಡಿ ಎಂದು ಡಾ.ಕೆನ್  ಯುವ ವಾಸ್ತುಶಿಲ್ಪಿಗಳಿಗೆ ಕರೆ ನೀಡಿದರು.  

ಬ್ಯಾರೀಸ್ ಗ್ರೂಪ್ ಜೊತೆ ಡಾ.ಕೆನ್ ಯಾಂಗ್ ಯೋಜನೆ 
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ದೇಶದಲ್ಲಿ ಪರಿಸರ ಸ್ನೇಹಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಬ್ಯಾರೀಸ್ ಗ್ರೂಪ್, ಡಾ.ಕೆನ್ ಯಾಂಗ್ ಜೊತೆ  ಚೆನ್ನೈ ನಲ್ಲಿ ಒಂದು ಪ್ರತಿಷ್ಠಿತ ಬೃಹತ್ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಶೀಘ್ರವೇ ಡಾ.ಕೆನ್ ಹಾಗೂ ಅವರ ತಂಡದ ಜೊತೆ ಚೆನ್ನೈನಲ್ಲಿ ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.  

ಬೀಡ್ಸ್ ಪ್ರಾಂಶುಪಾಲ ಅಶೋಕ್ ಮೆಂಡೋನ್ಸ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭ ಅಧ್ಯಾಪಕ ಲಕ್ಷ್ಮೀನಾರಾಯಣ್ ತಾವು ರಚಿಸಿದ ಡಾ.ಕೆನ್ ಅವರ ಭಾವಚಿತ್ರವನ್ನು ಅವರಿಗೆ ಉಡುಗೊರೆಯಾಗಿ ನೀಡಿದರು. 

ಡಾ. ಕೆನ್ ಯಾಂಗ್ ಅವರ ತಂಡದ ವಾಸ್ತುಶಿಲ್ಪಿಗಳಾದ ಸಾ ಸೆಂಗ್ ಈ, ಮುಹಮ್ಮದ್ ಹೈಖಲ್ ಹಾಗೂ ವನೆಸ್ಸ ಲೈ, ಬಿಐಟಿ ಪ್ರಾಂಶುಪಾಲ ಡಾ.ಆ್ಯಂಟನಿ ಎ.ಜೆ., ಶೈಕ್ಷಣಿಕ ಡೀನ್ ಡಾ.ಮಹಾಬಲೇಶ್ವರಪ್ಪ, ಪಾಲಿಟೆಕ್ನಿಕ್ ಪ್ರಾಂಶುಪಾಲ ಪ್ರೊ.ಅಝೀಝ್ ಮುಸ್ತಫ ಮತ್ತಿತರರು ಉಪಸ್ಥಿತರಿದ್ದರು. ಅಂಜಲಿ ಕಾರ್ಯಕ್ರಮ ನಿರೂಪಿಸಿದರು. 

ಡಾ.ಕೆನ್ ಯಾಂಗ್: ಮಲೇಶ್ಯದ ಡಾ.ಕೆನ್ ಅಂತಾರಾಷ್ಟ್ರೀಯ ಖ್ಯಾತಿಯ ಆರ್ಕಿಟೆಕ್ಟ್, ಪರಿಸರಶಾಸ್ತ್ರಜ್ಞ, ಪ್ಲ್ಯಾನರ್ ಹಾಗೂ ಲೇಖಕ. ಕೇಂಬ್ರಿಜ್ ವಿವಿಯಲ್ಲಿ ಪರಿಸರ ವಿಜ್ಞಾನ ಅಧ್ಯಯನ ಮಾಡಿದವರು. ಪರಿಸರಸ್ನೇಹಿ, ನಿಸರ್ಗಕ್ಕೆ ಪೂರಕ ಆಕರ್ಷಕ ಕಟ್ಟಡಗಳ ನಿರ್ಮಾಣದಲ್ಲಿ ಜಾಗತಿಕ ಮನ್ನಣೆ ಪಡೆದವರು.

ಪರಿಸರ ವಿಜ್ಞಾನ ಆಧರಿತ ಆರ್ಕಿಟೆಕ್ಚರ್ ನ್ನು ಪರಿಚಯಿಸಿದ ಹೆಗ್ಗಳಿಕೆ ಕೆನ್ ಅವರದ್ದು. "ಈ ಗ್ರಹವನ್ನು ಉಳಿಸಬಲ್ಲ 50 ಮಂದಿ" ಎಂಬ ತನ್ನ ಪಟ್ಟಿಯಲ್ಲಿ ಪ್ರತಿಷ್ಠಿತ ಗಾರ್ಡಿಯನ್ ಪತ್ರಿಕೆ ಕೆನ್ ಯಾಂಗ್ ಅವರನ್ನು ಹೆಸರಿಸಿತ್ತು. ಜಗತ್ತಿನ ವಿವಿಧೆಡೆ ಸುಮಾರು 200ಕ್ಕೂ ಹೆಚ್ಚು ಪರಿಸರ ಸ್ನೇಹಿ ಆಕರ್ಷಕ, ಬೃಹತ್ ಕಟ್ಟಡಗಳನ್ನು ನಿರ್ಮಿಸಿರುವ ಡಾ.ಕೆನ್ ವಿಶ್ವದ ಏಕೈಕ ಪರಿಣತ ಪರಿಸರವಿಜ್ಞಾನಿ ವಾಸ್ತುಶಿಲ್ಪಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜಗತ್ತಿನ 30ಕ್ಕೂ ಹೆಚ್ಚು ದೇಶಗಳ ಪ್ರತಿಷ್ಠಿತ ವಿವಿಗಳಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ.


ಮಲೇಶ್ಯ ವೀಸಾ ಕೊಟ್ಟರೆ, ನಿಮ್ಮಲ್ಲಿ ಗುಣಮಟ್ಟವಿದ್ದರೆ... 

"ನೀವು ಭಾರತೀಯ ವಿದ್ಯಾರ್ಥಿಗಳನ್ನು ಇಂಟರ್ನ್ ( ತರಬೇತಿ ವಿದ್ಯಾರ್ಥಿ) ಆಗಿ ತೆಗೆದುಕೊಳ್ಳುತ್ತೀರಾ?" ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ "ಮೊದಲು ಮಲೇಶ್ಯ ನಿಮಗೆ ವೀಸಾ ನೀಡಲು ಮನಸ್ಸು ಮಾಡಬೇಕು. ನೀವು ಗುಣಮಟ್ಟದ ಆರ್ಕಿಟೆಕ್ಟ್ ಮತ್ತು ಡಿಸೈನರ್ ಆಗಿರಬೇಕು. ಆಗ ಖಂಡಿತ ಪರಿಗಣಿಸುವೆ" ಎಂದು ಡಾ.ಕೆನ್ ಉತ್ತರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News