ಜೋಡುಪಾಲ ದುರಂತ: ಗುಡ್ಡದಲ್ಲಿ ಆಶ್ರಯ ಪಡೆದಿದ್ದ ಮೂವರ ರಕ್ಷಣೆ

Update: 2018-08-19 09:08 GMT

ಸುಳ್ಯ, ಆ.19: ಸಂಪಾಜೆ-ಮಡಿಕೇರಿ ಮಧ್ಯೆ ಶುಕ್ರವಾರ ಸಂಭವಿಸಿರುವ ಗುಡ್ಡ ಕುಸಿತದ ಸಂತ್ರಸ್ತರಾಗಿರುವ ಗುಡ್ಡದಲ್ಲಿ ಆಶ್ರಯ ಪಡೆದಿದ್ದ ಉತ್ತರ ಭಾರತ ಮೂಲದ ಮೂವರನ್ನು ರಕ್ಷಣಾ ತಂಡ ಇಂದು ರಕ್ಷಿಸಿದೆ.

ಜೋಡುಪಾಲದ ರಬ್ಬರ್ ಎಸ್ಟೇಟ್‌ವೊಂದರ ಕಾರ್ಮಿಕರೆನ್ನಲಾದ ಉತ್ತರ ಭಾರತ ಮೂಲದ ಮೂವರು ಇಲ್ಲಿನ ಗುಡ್ಡದಲ್ಲಿ ಮರವೊಂದರ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಅವರನ್ನು ಇಂದು ಪತ್ತೆಹಚ್ಚಿದ ಎನ್‌ಡಿಆರ್‌ಎಫ್, ಪೊಲೀಸರು ಹಾಗೂ ರಕ್ಷಣಾ ತಂಡ ಅಲ್ಲಿಂದ ಸಂಪಾಜೆ ಗಂಜಿ ಕೇಂದ್ರಕ್ಕೆ ಕರೆತಂದಿದೆ. ತೀರಾ ಅಸ್ವಸ್ಥರಾಗಿರುವ ಅವರಿಗೆ ಗಂಜಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ವೇಳೆ ಜೋಡುಪಾಲ ದುರಂತ ಸಂಭವಿಸಿರುವ ಪರಿಸರದಲ್ಲಿ ಭಾರೀ ಮಂಜು ಕವಿದ ವಾತಾವರಣವಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.

ಜೋಡುಪಾಲದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಕೆಳಭಾಗದಲ್ಲಿದ್ದ ಮೂರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಈ ವೇಳೆ ಹಲವರು ಮಣ್ಣಿನಡಿ ಸಿಲುಕಿದ್ದು, ಇಬ್ಬರ ಮೃತದೇಹ ಎರಡು ದಿನಗಳಲ್ಲಿ ಪತ್ತೆಯಾಗಿದೆ. ಗುಡ್ಡ ಕುಸಿತದಿಂದ ಸಂತ್ರಸ್ತರಾಗಿರುವ ನೂರಾರು ಮಂದಿಯನ್ನು ರಕ್ಷಣಾ ತಂಡ ರಕ್ಷಿಸಿ ಗಂಜಿ ಕೇಂದ್ರಗಳಿಗೆ ಸೇರಿಸಲಾಗಿದೆ. ಇನ್ನೂ ಹಲವರು ಈ ಪ್ರದೇಶದಲ್ಲಿ ಸಿಲುಕಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News