ಬೆಳ್ತಂಗಡಿ: ಕೇರಳ, ಕೊಡಗಿನ ಸಂತ್ರಸ್ಥರಿಗೆ ಕೆ.ಎಸ್.ಎಂ.ಸಿ.ಎ ವತಿಯಿಂದ ಪರಿಹಾರ ಸಂಗ್ರಹ
ಬೆಳ್ತಂಗಡಿ, ಆ. 19: ಕೇರಳ ಹಾಗೂ ಕೊಡಗಿನಲ್ಲಿ ಪ್ರವಾಹದಿಂದ ಸಂತ್ರಸ್ಥರಾಗಿರುವ ಜನರಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಂಘಟನೆಯಾಗಿರುವ ಕೆ.ಎಸ್.ಎಂ.ಸಿ.ಎ ವತಿಯಿಂದ ಸಂಗ್ರಹಿಸಲಾಗಿದ್ದ ಪರಿಹಾರ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಿಗೆ ಬೆಳ್ತಂಗಡಿಯ ಸೈಂಟ್ ಲಾರೆನ್ಸ್ ಪ್ರಧಾನ ದೇವಾಲಯದ ಮುಂಭಾಗದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ ಲಾರೆನ್ಸ್ ಮುಕ್ಕುಯಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ಸೀರೋಮಲಬಾರ್ ಕಧೋಲಿಕ್ ಧರ್ಮಪ್ರಾಂತ್ಯದ ಕೆ.ಎಸ್.ಎಂಸಿಎ ಸಂಘಟನೆಯ ವತಿಯಿಂದ ಕೊಡಗು ಜಿಲ್ಲೆಯ ಸಂತ್ರಸ್ಥರಿಗಾಗಿ ಈಗಾಗಲೆ ಆಹಾರ ಹಾಗೂ ಇತರೆ ಸಾಮಗ್ರಿಗಳನ್ನು ನೀಡಲಾಗಿದ್ದು ಇದೀಗ ಕೇರಳದ ಸಂತ್ರಸ್ಥರಿಗಾಗಿ ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಹಾರ ಪದಾರ್ಧಗಳು ಹಾಗೂ ಬಟ್ಟೆ, ಸೋಪು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಲಾಗಿರುವುದಾಗಿ ತಿಳಿಸಿದರು.
ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಅದನ್ನು ಇಲ್ಲಿ ಎಲ್ಲರೂ ಸೇರಿ ಮಾಡಿದ್ದಾರೆ ಎಂದರು. ಇಲ್ಲಿಂದ ಸಂಗ್ರಹಿಸಲಾಗಿರುವ ಸಾಮಗ್ರಿಗಳನ್ನು ಏಳು ಲಾರಿಗಳಲ್ಲಿ ತುಂಬಲಾಗಿದ್ದು ಈ ವಾಹನಗಳು ಇಂದು ಕೇರಳದ ವಯನಾಡಿಗೆ ಹೊರಟ್ಟಿದೆ.
ಈ ಸಂದರ್ಭದಲ್ಲಿ ಕೆ.ಎಸ್‌ಎಂಸಿಎಯ ಕೇಂದ್ರೀಯ ಸಮಿತಿ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ. ಸಂಚಾಲಕ ಫಾ ಬಿನೋಯಿ ಜೋಸೆಫ್, ಫಾ. ಟೀಮಿ ಕಳ್ಳಿಕಾಟ್, ಫಾ. ಅಬ್ರಹಾಂ ಪಟ್ಟೇರಿ, ಫಾ. ವರ್ಕಿ ಮಾಳಿಗಯಿಲ್, ಸಂಘಟನೆಯ ಮುಖಂಡರುಗಳಾದ ವಿ.ಟಿ ಸೆಬಾಸ್ಟಿಯನ್, ಪ್ರದೀಪ್ ಕೆ.ಸಿ, ಅಶ್ವಥ್ ಸೆಬಾಸ್ಟಿಯನ್, ಹಾಗೂ ಇತರರು ಉಪಸ್ಥಿತರಿದ್ದರು.