ಶೈಕ್ಷಣಿಕ ಕ್ಷೇತ್ರದೊಂದಿಗೆ ಆರೋಗ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿ: ಸಚಿವ ಆರ್.ವಿ. ದೇಶಪಾಂಡೆ

Update: 2018-08-19 14:49 GMT

ಮಂಗಳೂರು, ಆ.19: ಬ್ಯಾರಿ ಸಮುದಾಯದ ವಿದ್ಯಾರ್ಥಿಗಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸುವಂತಹ ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣದ ಬಗ್ಗೆ ಬ್ಯಾರಿಗಳಲ್ಲಿ ಹುಟ್ಟಿಕೊಂಡಿರುವ ಜಾಗೃತಿಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬ್ಯಾರಿ ಸಮುದಾಯವು ಶೈಕ್ಷಣಿಕ ಕ್ಷೇತ್ರದೊಂದಿಗೆ ಆರೋಗ್ಯ ಕ್ಷೇತ್ರದಲ್ಲೂ ತನ್ನ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.

ದುಬೈಯ ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವತಿಯಿಂದ ರವಿವಾರ ನಗರದ ಪುರಭವನದಲ್ಲಿ ನಡೆದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪುಸ್ತಕದ ಕಲಿಕೆಗೆ ಸೀಮಿತರಾಗದೆ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನ ಪ್ರಗತಿಪಥದಲ್ಲಿ ಸಾಗುವಾಗ ಅದಕ್ಕೆ ಸರಿಸಾಟಿಯಾಗಿ ನಿಲ್ಲಬೇಕು. ತಂತ್ರಜ್ಞಾನವನ್ನು ಯಾವ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳದೆ ಸಮಾಜಕ್ಕೆ ಮಾದರಿಯಾಗಿ ಬಾಳಬೇಕು ಎಂದು ಆರ್.ವಿ.ದೇಶಪಾಂಡೆ ಹೇಳಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ ಜಾತಿ, ಮತ ಮರೆತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ಬಿಸಿಎಫ್ ಸಂಘಟನೆಯ ಈ ಕಾರ್ಯ ಶ್ಲಾಘನೀಯವಾಗಿದೆ. ದೇಶದ ಭವಿಷ್ಯವು ವಿದ್ಯಾರ್ಥಿಗಳ ಕೈಯಲ್ಲಿವೆ ಎಂಬ ಪ್ರಜ್ಞೆ ಎಲ್ಲರಲ್ಲೂ ಇರಬೇಕಿದೆ. ಹಾಗಾದಾಗ ಮಾತ್ರ ಸುಂದರ ಸಮಾಜ ಕಟ್ಟಲು ಸಾಧ್ಯವಿದೆ. ವಿವಿಧ ಸಾಮಾಜಿಕ ಸಂಘಟನೆಗಳಿಂದ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಯ್ಯುವ ಗುರಿ ಹಾಕಿಕೊಳ್ಳಬೇಕು. ಅಷ್ಟೇ ಅಲ್ಲ ತಾನು ಪಡೆದ ಸಹಾಯಧನವನ್ನು ಸಮಾಜಕ್ಕೆ ಮರಳಿ ಕೊಡುಗೆಯಾಗಿ ನೀಡುವ ಮನಸ್ಸು ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹಿಂದೆ ಮುಸ್ಲಿಮರಲ್ಲಿ ಶೈಕ್ಷಣಿಕ ಜಾಗೃತಿ ಇರಲಿಲ್ಲ. ಹಾಗಾಗಿ ಯುವಕರು ಅಡ್ಡಹಾದಿ ಹಿಡಿಯುತ್ತಿದ್ದರು ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ, ಈಗ ಹಾಗಲ್ಲ. ಮುಸ್ಲಿಮರು ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾರೆ. ಮುಸ್ಲಿಮ್ ಸಂಘಟನೆಗಳೂ ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಪ್ರಜ್ಞೆ ಮೂಡಿಸುತ್ತಿದೆ. ಇದು ಸಮಾಜದ ಮೇಲೆ ಸತ್ಪರಿಣಾಮ ಬೀರುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ. ಯೂಸುಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ದುಆಗೈದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕೆ. ಹರೀಶ್ ಕುಮಾರ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಎ.ಎಂ.ಖಾನ್, ವಿಶ್ವಾಸ್ ಬಾವಾ ಬಿಲ್ಡರ್ಸ್‌ ಆಡಳಿತ ನಿರ್ದೇಶಕ ಅಬ್ದುರ್ರವೂಫ್ ಪುತ್ತಿಗೆ, ಬ್ಯಾರಿ ಅಕಾಡಮಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಕರಂಬಾರ್, ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಡಿಕೆಎಸ್‌ಸಿ ಕಾರ್ಯಾಧ್ಯಕ್ಷ ಹಾತಿಮ್ ಕುಂಞಿ, ಮಾಜಿ ಸೆನೆಟ್ ಸದಸ್ಯ ಪಿ.ವಿ.ಮೋಹನ್, ಜೆಡಿಎಸ್ ಮುಖಂಡರಾದ ಎಂ.ಬಿ.ಸದಾಶಿವ, ವಿಟ್ಲ ಮುಹಮ್ಮದ್ ಕುಂಞಿ, ಉದ್ಯಮಿಗಳಾದ ಮನ್ಸೂರ್ ಅಹ್ಮದ್ ಆಝಾದ್, ಕತರ್ ಅಬ್ದುಲ್ಲಾ ಮೋನು, ಫತಾವುಲ್ಲಾ ಅಬುದಾಬಿ, ಅಬುಸಾಲಿ, ಶೇಖ್ ಮೊಹಿಯ್ಯುದ್ದೀನ್ ಕರ್ನಿರೆ, ಸಿ.ಆರ್. ಅಬೂಬಕರ್, ಎಸ್.ಎ.ಶರೀಫ್, ಎಸ್‌ಬಿಐ ಬ್ರಾಂಚ್ ಮ್ಯಾನೇಜರ್ ರಹ್ಮತ್ ಅಲಿ, ಮೀಫ್ ಅಧ್ಯಕ್ಷ ಎಡಪದವು ಮುಹಮ್ಮದ್ ಬ್ಯಾರಿ, ನ್ಯಾಯವಾದಿಗಳಾದ ಮುಹಮ್ಮದ್ ಅಲಿ, ಬಿ.ಎಂ.ಬಶೀರ್ ಅಹ್ಮದ್, ಬ್ಯಾರಿ ಅಕಾಡಮಿಯ ಸದಸ್ಯರಾದ ಹುಸೈನ್ ಕಾಟಿಪಳ್ಳ, ಬಶೀರ್ ಬೈಕಂಪಾಡಿ ಮತ್ತಿತರರು ಭಾಗವಹಿಸಿದ್ದರು.

ವೇದಿಕೆಯಲ್ಲಿ ಬಿಸಿಎಫ್ ಸ್ಕಾಲರ್‌ಶಿಪ್ ಕಮಿಟಿಯ ಅಧ್ಯಕ್ಷ ಎಂ.ಇ. ಮೂಳೂರು, ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ, ಅಮೀರುದ್ದೀನ್ ಎಸ್.ಐ. ಮತ್ತಿತರರು ಉಪಸ್ಥಿತರಿದ್ದರು.

ಬಿಸಿಎಫ್ ಪೋಷಕ ಬಿ.ಎಂ. ಮುಮ್ತಾಝ್ ಅಲಿ ಸ್ವಾಗತಿಸಿದರು. ಇಬ್ರಾಹೀಂ ಮುಸ್ಲಿಯಾರ್ ಕಿರಾಅತ್ ಪಠಿಸಿದರು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್ ಮತ್ತು ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಮತ್ತು ದ.ಕ. ಜಿಲ್ಲೆಯ ಸುಮಾರು 500ರಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸುಮಾರು 55 ಮಹಿಳೆಯ ರಿಗೆ ಸ್ವ-ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.

10ನೆ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತೋನ್ಸೆ ಹೂಡೆಯ ನಿಸ್ಬಾ ಸನಾ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮೂಡುಬಿದಿರೆಯ ಸಿ.ಎಚ್. ನಮೀರಾ ಫಾತಿಮಾ, ಗಂಗೊಳ್ಳಿಯ ಆಯಿಶಾ ಇಫ್ರಾ, ಸಾಲೆತ್ತೂರಿನ ರಂಶೀನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮದ್ರಸ ಪಬ್ಲಿಕ್‌ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಬೆಳ್ಳಾರೆಯ ಹಿದಾಯತುಲ್ ಇಸ್ಲಾಮ್ ಮದ್ರಸದ 5ನೆ ತರಗತಿಯ ವಿದ್ಯಾರ್ಥಿನಿ ಅಶ್‌ನಾ ಝಿಯಾ, ಉಪ್ಪಿನಂಗಡಿಯ ತನ್ವೀರುಲ್ ಇಸ್ಲಾಮ್ ಮದ್ರಸದ 7ನೆ ತರಗತಿಯ ವಿದ್ಯಾರ್ಥಿನಿ ಆಯಿಶತ್ ಮುಬಶ್ಶಿರಾ, ಕಟ್ಟತ್ತಿಲದ ಹಯಾತುಲ್ ಇಸ್ಲಾಮ್ ಮದ್ರಸದ 10ನೆ ತರಗತಿಯ ವಿದ್ಯಾರ್ಥಿನಿ ಫಾತಿಮತ್ ಝಾಕಿಯಾ, ಸುರತ್ಕಲ್‌ನ ಅಲ್ ಬದ್ರಿಯಾ ಮದ್ರಸದ ವಿದ್ಯಾರ್ಥಿನಿ ಫಾತಿಮಾ ಫಝೀಲಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸ್ಕೇಟಿಂಗ್‌ನಲ್ಲಿ ಅಪ್ರತಿಮ ಸಾಧನೆಗೈಯ್ಯುತ್ತಿರುವ ಬಾಲಕ ಮುಹಮ್ಮದ್ ಫರಾಝ್ ಅಲಿ ಅವರಿಗೆ ಬಿಎಸಿಎಫ್ ಸ್ಪೋರ್ಟ್ಸ್ ಅವಾರ್ಡ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸಚಿವ ಬಿ.ಎ.ಮೊಹಿದಿನ್ ಹಾಗೂ ಇತ್ತೀಚೆಗೆ ಕೇರಳ-ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News