ಜ್ಞಾನದ ಹಸಿವು ಬೆನ್ನತ್ತಿ: ಗಣೇಶ್ ಅಮೀನ್ ಸಂಕಮಾರ್
ಮಂಗಳೂರು, ಆ.19: ದೇಶದ ಭವಿಷ್ಯದ ಜನಾಂಗ ಎಂದೇ ಕರೆಸಿಕೊಳ್ಳುತ್ತಿರುವ ಯುವಜನರು ಹಾಗೂ ವಿದ್ಯಾರ್ಥಿಗಳು ಹಣ, ಅಂತಸ್ತಿನ ವ್ಯಾಮೋಹಕ್ಕೆ ಒಳಗಾಗದೆ ವಿದ್ಯೆ ಮತ್ತು ಜ್ಞಾನದ ಹಸಿವಿನ ಬೆನ್ನತ್ತಬೇಕು. ಆವಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಬಿಲ್ಲವ ಸಂಘ ಕುವೈಟ್, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮತ್ತು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ರವಿವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರೇರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹಣದಿಂದಲೇ ಲೋಕ ಗೆಲ್ಲಬಹುದು ಎಂಬ ಮೂರ್ಖತೆಯಿಂದ ಜನರು ದಿನನಿತ್ಯ ಸೋಲುತ್ತಿದ್ದಾರೆ. ನಿಜವಾಗಿ ವಿದ್ಯೆ, ಜ್ಞಾನದಿಂದ ಜಗತ್ತನ್ನೇ ಗೆಲ್ಲಬಹುದು. ಜೀವನದಲ್ಲಿ ಎದುರಾಗುವ ಕಷ್ಟಗಳು ಜೀವನದ ಪಾಠ ಕಲಿಸುತ್ತದೆ. ಸವಾಲು, ಅವಮಾನಗಳಿಗೆ ಧೃತಿಗೆಡದೆ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಡಾ. ಗಣೇಶ್ ಅಮೀನ್ ಸಂಕಮಾರ್ ನುಡಿದರು.
ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಪ್ರಭಾಕರ ಬೋಳ, ಮುಂಬೈ ಬಿಲ್ಲವ ಚೇಂಬರ್ ಆ್ ಕಾಮರ್ಸ್ ಅಧ್ಯಕ್ಷ ಎನ್.ಟಿ. ಪೂಜಾರಿ, ಬಿಲ್ಲವ ಸಂಘ ಕುವೈಟ್‌ನ ಅಧ್ಯಕ್ಷ ರಘು ಪೂಜಾರಿ, ರಾಘವ ಪೂಜಾರಿ, ರೋಹಿತ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.