ದ.ಕ., ಉಡುಪಿಯಲ್ಲಿ 2,336 ಮನೆಗಳಿಗೆ ಹಾನಿ, ಕೊಡಗಿನಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ: ಆರ್.ವಿ.ದೇಶಪಾಂಡೆ

Update: 2018-08-19 17:49 GMT

ಮಂಗಳೂರು, ಆ.19: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಟ್ಟು 2336 ಮನೆಗಳಿಗೆ ಹಾನಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಎಷ್ಟು ಮನೆಗಳಿಗೆ ಹಾನಿಯಾಗಿದೆ ಎನ್ನುವ ಮಾಹಿತಿ ಇನ್ನೂ ಸಂಪೂರ್ಣವಾಗಿ ಸಿಕ್ಕಿರುವುದಿಲ್ಲ. ಅಲ್ಲಿ ಸಮರೋಪಾದಿಯಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದ ಜೋಡುಪಾಲ ಹಾಗೂ ಆಸುಪಾಸಿನಲ್ಲಿ ನಡೆದ ಭೂ ಕುಸಿತದ ಪ್ರದೇಶ ಹಾಗೂ ಸಂತ್ರಸ್ತರಿಗೆ ನಿರ್ಮಿಸಲಾದ ತಾತ್ಕಲಿಕ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ಸುದ್ದಿಗೋಷ್ಠಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1326 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 299 ಮನೆಗಳು ಸಂಪೂರ್ಣ ಹಾನಿಗೀಡಾಗಿದೆ. ಉಳಿದ ಮನೆಗಳು ಭಾಗಶಃ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ 1010 ಮನೆಗಳಿಗೆ ಹಾನಿಯಾಗಿದೆ. ಕೊಡಗಿನಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ನಿಖರಾದ ವರದಿ ಇನ್ನೂ ಬಂದಿಲ್ಲಾ ಎಂದು ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ

ಕೊಡಗು ಜಿಲ್ಲೆಯ ಮೂರು ಕಡೆ ಭೂ ಕುಸಿತಾಗಿದ್ದು ಜೋಡುಪಾಲ, ಮೊಣ್ಣಂಗೇರಿ ಮದೆನಾಡು ಗ್ರಾಮಗಳಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ಇದುವರೆಗೆ ಒಟ್ಟು 828 ಮಂದಿ ಸಂತ್ರಸ್ತರನ್ನು ರಕ್ಷಿಸಿಲಾಗಿದೆ. 825 ಮಂದಿ ಸಂತ್ರಸ್ತರ ಕೇಂದ್ರದಲ್ಲಿದ್ದಾರೆ. ಕೊಡಗಿನ ಭೂ ಕುಸಿತ ಹಾಗೂ ಮಳೆಯ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಯಾವೂದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ದೇಶಪಾಂಡೆ ತಿಳಿಸಿದ್ದಾರೆ.

ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಮಳೆ ಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗಾಗಿ 7 ಕೇಂದ್ರ ತೆರೆಯಲಾಗಿದೆ ಎಂದು ದೇಶಪಾಂಡೆ ತಿಳಿಸಿದರು. ಕೊಡಗಿನಲ್ಲಿ ಅನಿರೀಕ್ಷಿತವಾಗಿ ಆಗಿರುವ ಭೂಕುಸಿತದ ಬಗ್ಗೆ ತಜ್ಞರ ಮೂಲಕ ಸರಕಾರ ವರದಿಯನ್ನು ಪಡೆಯಲಿದೆ. ಸದ್ಯ ಭೂಸಿಕತಕ್ಕೆ ನಿಖರವಾದ ತಜ್ಞರ ಮಾಹಿತಿ ಬಂದಿಲ್ಲ.ಮಾನವ ನರ್ಮಿತ ಹಾಗೂ ಪಾಕೃತಿಕ ಕಾರಣಗಳು ಸೇರಿದಂತೆ ಎರಡು ಕಾರಣಗಳು ಭೂಕುಸಿತಕ್ಕೆ ಕಾರಣವಾಗಿರಬಹುದು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಪರಿಹಾರ ಕಾರ್ಯಕ್ಕೆ 100 ಕೋಟಿ ರೂ. ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ತಲಾ 50 ಕೋಟಿ ರೂ. ಗಳನ್ನು ಸರಕಾರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಕೊಡಗಿನಲ್ಲಿ ಮೃತಪಟ್ಟ ಇಬ್ಬರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ. ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಶಾಸಕ ಹರೀಶ್ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News