ಮರಳು ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತದಿಂದ ಕ್ರಮ: ಭೋಜೆಗೌಡ ಆಗ್ರಹ

Update: 2018-08-19 15:24 GMT

ಕುಂದಾಪುರ, ಆ.19: ಉಡುಪಿ ಜಿಲ್ಲೆಯ ಪ್ರಮುಖ ಸಮಸ್ಯೆಯಾಗಿರುವ ಮರಳುಗಾರಿಕೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಆಗ್ರಹಿಸಿದ್ದಾರೆ.

ಕುಂದಾಪುರ ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನಕ್ಕೆ ರವಿವಾರ ಕುಟುಂಬ ದೊಂದಿಗೆ ಭೇಟಿ ನೀಡಿ ದೇವರಿಗೆ ಸೇವೆ ಸಲ್ಲಿಸಿದ ಬಳಿಕ ಅವರು ಮಾಧ್ಯಮದವ ರೊಂದಿಗೆ ಮಾತನಾಡುತಿದ್ದರು. ಅವೈಜ್ಞಾನಿಕ ಮರಳು ನೀತಿಯಿಂದ ಜಿಲ್ಲೆಯ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಜಿಲ್ಲಾಧಿಕಾರಿಗಳು ಕೂಡಲೆ ಸಂಬಂಧಪಟ್ಟ ಇಲಾಖಾ ಅಧಿ ಕಾರಿಗಳ, ಮರಳು ಗುತ್ತಿಗೆದಾರರ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಮರಳುಗಾರಿಕೆಯ ಕುರಿತು ಸಮಗ್ರ ಚರ್ಚೆ ನಡೆಸಬೇಕು ಎಂದರು.

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಸಂಬಂಧ ರೂಪಿಸಿರುವ ಮಾನದಂಡ ಅವೈಜ್ಞಾನಿಕ ಎಂಬುದನ್ನು ಇತ್ತೀಚೆಗೆ ಶಿಕ್ಷಣ ಸಚಿವರೊಂದಿಗೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎ, ಬಿ, ಸಿ ಎಂಬ ವಲಯವಾರು ವಿಂಗಡನೆ ಯಲ್ಲಿ ಸರಿಯಾದ ಸ್ಪಷ್ಟತೆ ಇಲ್ಲ. ಅಧಿಕಾರಿಗಳ ಏಕಪಕ್ಷೀಯ ತೀರ್ಮಾನದಿಂದ ಗೊಂದಲಗಳು ಉಂಟಾಗುತ್ತಿದೆ. ಸಮಸ್ಯೆಯ ಪರಿಹಾರಕ್ಕೆ ಸಭೆ ಕರೆದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಅನುದಾನಿತ ಐಟಿಐ ನೌಕರರ ಸಮಸ್ಯೆಯ ಪರಿಹಾರಕ್ಕೆ ಮುಖ್ಯಮಂತ್ರಿ ಗಳೊಂದಿಗೆ ಹಾಗೂ ಸಂಬಂಧಿತ ಇಲಾಖೆಯ ಸಚಿವರೊಂದಿಗೆ ಚರ್ಚಿಸ ಲಾಗುವುದು. ರಾಜ್ಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅರ್ಹ ಹಿರಿಯ ಉಪನ್ಯಾಸಕರಿಗೆ ಪದೋನ್ನತಿ ನೀಡುವ ಮೂಲಕ ಪೂರ್ಣಕಾಲಿಕ ಪ್ರಾಂಶುಪಾಲರ ಖಾಲಿ ಹುದ್ದೆ ತುಂಬಲು ಕ್ರಮ ಕೈಗೊಳ್ಳಬೇಕು. ಅಗತ್ಯ ಇದ್ದಲ್ಲಿ ನೇರ ನೇಮಕಾತಿಯ ಮೂಲಕವೂ ಸಮಸ್ಯೆಯ ಪರಿಹಾರ ಮಾಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎಲ್.ಧರ್ಮೇಗೌಡ, ಅಚಲ ಭೋಜೇ ಗೌಡ, ನಿತೇಶ್ ಭೋಜೇಗೌಡ, ನಿರೀಕ್ಷಾ ಭೋಜೇಗೌಡ, ಜೆಡಿಎಸ್ ಪಕ್ಷದ ಪ್ರಮುಖರಾದ ರವಿ ಶೆಟ್ಟಿ ಬೈಂದೂರು, ರಂಜಿತ್ ಕುಮಾರ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ ಮೊದಲಾದವರು ಹಾಜರಿದ್ದರು.

ಮಲೆನಾಡು, ಕರಾವಳಿ ಹಾಗೂ ಕೊಡುಗು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದಾಗಿ ಗಂಭೀರ ಸ್ವರೂಪದ ಹಾನಿಯುಂಟಾಗಿದೆ. ಜೀವ ಹಾನಿ, ಬೆಳೆ ಹಾನಿ, ಕಟ್ಟಡ ಹಾನಿ ಸೇರಿದಂತೆ ಮೂಲಭೂತ ವ್ಯವಸ್ಥೆಗಳೇ ನಾಶವಾಗಿದೆ. ಅನೂಕೂಲಕರ ವಾದ ವಾತಾವರಣ ಇಲ್ಲದ ಕಾರಣ ಮುಖ್ಯಮಂತ್ರಿಗಳಿಗೆ ಈ ಎಲ್ಲ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಈ ಭಾಗದ ಪರಿಸ್ಥಿತಿಯನ್ನು ಅರಿತುಕೊಳ್ಳಲು ಸ್ವತ: ಮುಖ್ಯಮಂತ್ರಿಗಳೆ ಜಿಲ್ಲಾಧಿಕಾರಿಗಳು, ಎಸ್ಪಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಪರಿಹಾರದ ಕಾರ್ಯಕ್ರಮ ಕೈಗೊಳ್ಳಲು ಯಾವುದೆ ಹಣಕಾಸಿನ ಅಡಚಣೆ ಇಲ್ಲ. ಅತಿವೃಷ್ಟಿಯಿಂದಾದ ಹಾನಿಗೆ ನೀಡುವ ಪರಿಹಾರವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್.ಎಲ್.ಭೋಜೆಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News