ಉಡುಪಿ ಜಿಲ್ಲಾಡಳಿತದ ನೇತೃತ್ವದಲ್ಲಿ ಸಂಗ್ರಹಿಸಿದ ನಾಲ್ಕು ಟನ್ ಅಗತ್ಯ ವಸ್ತುಗಳು ಕೇರಳಕ್ಕೆ ರವಾನೆ

Update: 2018-08-19 15:38 GMT

ಉಡುಪಿ, ಆ.19: ಉಡುಪಿ ಜಿಲ್ಲಾಡಳಿತವು ರೋಟರಿ ಕ್ಲಬ್ ಮಣಿಪಾಲ ಹಿಲ್ಸ್, ಎಂಐಟಿ ರೋಟರಾಕ್ಟ್ ಕ್ಲಬ್ ಮತ್ತು ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ಮೊದಲ ಹಂತದಲ್ಲಿ ಸಂಗ್ರಹಿಸಲಾದ ಅಗತ್ಯ ವಸ್ತುಗಳನ್ನು ಇಂದು ಕೇರಳದ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಯಿತು.

ಆ.18ರಿಂದ ಮಣಿಪಾಲ ಮಣ್ಣಪಳ್ಳ ರೋಟರಿ ಹಾಲ್‌ನಲ್ಲಿ ಮತ್ತು ಮಣಿ ಪಾಲ ಬಸ್ ನಿಲ್ದಾಣ ಬಳಿಯ ಕೆಎಂಸಿ ಕಚೇರಿ ಸಿಬ್ಬಂದಿಗಳ ಕೊಠಡಿಯಲ್ಲಿ ರುವ ವಿಪತ್ತು ನಿವಾರಣಾ ಸಂಗ್ರಹ ಕೇಂದ್ರದಲ್ಲಿ ಸಾರ್ವಜನಿಕರಿಂದ ಚಾದರ್, ಚಾಪೆ, ಅಕ್ಕಿ, ಹೊದಿಕೆ, ಉಡುಪುಗಳು ಸೇರಿದಂತೆ ಒಟ್ಟು ನಾಲ್ಕು ಟನ್ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದೆ.

ಇಂದು ಬೆಳಗ್ಗೆ ಜಿಲ್ಲಾಡಳಿತದಿಂದ ಕೊಡ ಮಾಡಲಾದ ಎರಡು ವಾಹನ ಗಳಲ್ಲಿ ಮೊದಲ ಹಂತದಲ್ಲಿ ಸಂಗ್ರಹವಾದ ನಾಲ್ಕು ಟನ್ ವಸ್ತುಗಳನ್ನು ನವ ಮಂಗಳೂರು ಬಂದರಿನಿಂದ ಇಂಡಿಯನ್ ಕೋಸ್ಟ್ ಗಾರ್ಡ್ ಹಗಡು ‘ಸಂಕಲ್ಪ್’ ಮೂಲಕ ಕೇರಳ ರಾಜ್ಯ ಕಲ್ಲಿಕೋಟೆ ಪುನವರ್ಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮತ್ತೆ ಸಂಗ್ರಹಿಸಲಾಗುತ್ತಿರುವ ಅಗತ್ಯ ವಸ್ತುಗಳನ್ನು ಆ.20ರಂದು ಕೇರಳ ಹಾಗೂ ಕೊಡಗು ಜಿಲ್ಲೆಗೆ ಕಳುಹಿಸಿಕೊಡಲಾಗುವುದು. ಅದೇ ರೀತಿ ಮಣಿ ಪಾಲ ಮಾಹೆ ಸ್ವಯಂ ಸೇವಕರು ಸಂಗ್ರಹಿಸಿದ 800 ಕೆ.ಜಿ. ಅಕ್ಕಿ ಮತ್ತು 65 ಹೊದಿಕೆ ಸೇರಿದಂತೆ ವಿವಿಧ ಅಗತ್ಯವಸ್ತುಗಳನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಇಂದು ಬೆಳಗ್ಗೆ ಕೊಡಗು ಜಿಲ್ಲೆಗೆ ಕಳುಹಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಉಡುಪಿ ಕೆಎಸ್‌ಆರ್‌ಟಿಸಿ ಡಿಪ್ಪೊದಲ್ಲಿ ಇಂದು ಬೆಳಗ್ಗೆಯಿಂದ ಸಂಜೆಯ ವರೆಗೆ ಸಾರ್ವಜನಿಕರು ನೆರೆ ಸಂತ್ರಸ್ತರಿಗೆ ನೀಡಿದ ಅಗತ್ಯ ವಸ್ತುಗಳನ್ನು ಕೆಎಸ್ ಆರ್‌ಟಿಸಿ ರೂಟ್ ಬಸ್‌ಗಳ ಮೂಲಕ ಮಂಗಳೂರು ಹಾಗೂ ಬೆಂಗಳೂರಿಗೆ ಸಾಗಿಸಲಾಯಿತು.

‘ಹಾಸನ ಅಥವಾ ಬೆಂಗಳೂರು ಸಂಗ್ರಹ ಕೇಂದ್ರಕ್ಕೆ ನಾಲ್ಕು ಬಾಕ್ಸ್ ಹಾಗೂ ಒಂದು ಗೋಣಿ ಚೀಲದಲ್ಲಿ ಅಗತ್ಯವಸ್ತುಗಳನ್ನು ಮತ್ತು ಮಂಗಳೂರಿಗೆ 25 ಕೆ.ಜಿ. ತೂಕದ 20 ಗೋಣಿ ಚೀಲ ಅಕ್ಕಿ, ಮೂರು ಬಾಕ್ಸ್‌ಗಳನ್ನು ಇಂದು ಸಂಜೆ ಕಳುಹಿಸಿಕೊಡಲಾಯಿತು’ ಎಂದು ಉಡುಪಿ ಡಿಪ್ಪೊ ವೆುನೇಜರ್ ತಿಳಿಸಿ ದ್ದಾರೆ. ಆದರೆ ಕುಂದಾಪುರ ಡಿಪ್ಪೊದಲ್ಲಿ ಯಾವುದೇ ವಸ್ತುಗಳು ಸಂಗ್ರಹವಾಗಿಲ್ಲ ಎಂದು ಅಲ್ಲಿನ ಮೆನೇಜರ್ ತಿಳಿಸಿದ್ದಾರೆ.

ಕೊಲ್ಲೂರು ದೇವಳದಿಂದ ದೇಣಿಗೆ
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವತಿಯಿಂದ ನೆರೆ ಪೀಡಿತ ಕೇರಳ ರಾಜ್ಯಕ್ಕೆ ಒಂದು ಕೋಟಿ ರೂ. ಹಾಗೂ ಕೊಡಗು ಜಿಲ್ಲೆಗೆ 25ಲಕ್ಷ ರೂ. ವನ್ನು ಬಿಡುಗಡೆಗೊಳಿಸಲು ಮಂಜೂರಾತಿ ಕೋರಿ ವ್ಯವಸ್ಥಾಪನಾ ಸಮಿತಿಯು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದೆ.
 ‘ಈಗಾಗಲೇ ಕೊಲ್ಲೂರು ದೇವಳದಿಂದ ಕೇರಳ ರಾಜ್ಯಕ್ಕೆ 1ಕೋಟಿ ರೂ. ಹಾಗೂ ಕೊಡಗು ಜಿಲ್ಲೆಗೆ 25ಲಕ್ಷ ರೂ. ಹಣ ಒದಗಿಸುವ ಕುರಿತ ಮನವಿ ಬಂದಿದ್ದು, ಈ ಪ್ರಾಸ್ತಾವನೆಯನ್ನು ನಾಳೆ ರಾಜ್ಯ ಸರಕಾರಕ್ಕೆ ಕಳುಹಿಸಲಾಗು ವುದು’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪತ್ರಿಕೆಗೆ ತಿಳಿಸಿದ್ದಾರೆ.

ಕೊಲ್ಲೂರು ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ
 ಕೇರಳ ಹಾಗೂ ಕೊಡಗಿನಲ್ಲಿ ಸಂಭವಿಸಿರುವ ಜಲ ಪ್ರಳಯದ ಹಿನ್ನೆಲೆಯಲ್ಲಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ಯನ್ನು ಸಲ್ಲಿಸಲಾಯಿತು.

ಕೊಲ್ಲೂರು ಗ್ರಾಮಸ್ಥರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಕೇರಳ, ಕೊಡಗು ಸಮಸ್ಥಿತಿಗೆ ಬರುವಂತೆ ಪ್ರಾರ್ಥಿಸಲಾಯಿತು. ಈ ಪ್ರದೇಶಗಳಿಗೆ ಕಳುಹಿಸಲು ದಿನನಿತ್ಯದ ವಸ್ತುಗಳು ಹಾಗೂ ದೇಣಿಗೆ ಸಂಗ್ರಹಿಸಲು ನಿರ್ಧರಿಸಲಾಯಿತು. ಇದರಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ದೇವಸ್ಥಾನದ ಪ್ರಧಾನ ಅರ್ಚಕರು, ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News