ದಲಿತರು ತಯಾರಿಸಿದ ಆಹಾರ ಸೇವಿಸಲು ನಿರಾಕರಣೆ

Update: 2018-08-19 15:40 GMT

ಆಲಪ್ಪುಳ, ಆ. 19: ಪಲ್ಲಿಪ್ಪಾಡ್ ಗ್ರಾಮ ಪಂಚಾಯತ್‌ನ ಪರಿಹಾರ ಶಿಬಿರದಲ್ಲಿ 23 ದಲಿತ ಕುಟಂಬಗಳು ಜಾತಿ ತಾರತಮ್ಯ ಎದುರಿಸುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್. ಸುಹಾಸ್ ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಾರ್ತಿಕಪಲ್ಲಿಯ ತಹಶೀಲ್ದಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟರಿಗೆ ನಿರ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂಜಿಲಿಮೂಡು ಎಲ್.ಪಿ. ಶಾಲೆಯಲ್ಲಿ ಕಾರ್ಯಾಚರಿಸುತ್ತಿರುವ ಪರಿಹಾರ ಶಿಬಿರದಲ್ಲಿ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ತಮ್ಮನ್ನು ಅವಮಾನಿಸಿದ್ದಾರೆ ಎಂದು ಅಖಿಲ ಕೇರಳ ಪುಲಯರ್ ಮಹಾಸಭಾದ ಅಡಿಯಲ್ಲಿ ಬರುವ 23 ಕುಟುಂಬಗಳ 56 ಸದಸ್ಯರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ದಲಿತ ಸಮುದಾಯದ ಜನರು ತಯಾರಿಸುವ ಆಹಾರ ಹಾಗೂ ವಾಸ್ತವ್ಯವನ್ನು ಹಂಚಿಕೊಳ್ಳಲು ಇಚ್ಚಿಸದ ಕ್ರಿಶ್ಚಿಯನ್ ಸಮುದಾಯದ 27ಕ್ಕೂ ಅಧಿಕ ಕುಟುಂಬಗಳು ಶನಿವಾರ ಇನ್ನೊಂದು ಪರಿಹಾರ ಶಿಬಿರಕ್ಕೆ ತೆರಳಿದ್ದಾರೆ ಎಂದು ಇಲ್ಲಿನ ಪರಿಹಾರ ಕೇಂದ್ರದಲ್ಲಿರುವ ದಲಿತ ಸಮುದಾಯದ ಟಿನು ವಿಜಯನ್ ತಿಳಿಸಿದ್ದಾರೆ.

“ನಾವು ನಮ್ಮ ಮನೆಗಳನ್ನು ತ್ಯಜಿಸಿ ಜುಲೈ 18ರಂದು ಈ ಪರಿಹಾರ ಶಿಬಿರಕ್ಕೆ ಬಂದೆವು. ಈ ಶಿಬಿರದಲ್ಲಿ 23 ದಲಿತ ಕುಟುಂಬ ಹಾಗೂ 28 ಕ್ರಿಶ್ಚಿಯನ್ ಕುಟುಂಬ ಇದೆ. ತಮ್ಮ ಪಾಲಿನ ಆಹಾರ ವಸ್ತುಗಳನ್ನು ನೀಡಿ. ನಾವು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತೇವೆ ಎಂದು ಕ್ರಿಶ್ಚಿಯನ್ ಸಮುದಾಯದವರು ನಮ್ಮಲ್ಲಿ ಕೇಳಿದ್ದಾರೆ. ಆದಾಗ್ಯೂ, ನಾವು ಒಟ್ಟಾಗಿ ಅಡುಗೆ ಮಾಡುವ ಹಾಗೂ ಶಿಬಿರದಲ್ಲಿ ವಾಸ್ತವ್ಯ ಹಂಚಿಕೊಳ್ಳೋಣ ಎಂದು ಹೇಳಿದೆವು. ಆದರೆ, ಅವರು ನಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ. ಒಂದು ಶಿಬಿರಕ್ಕೆ ನೀಡಿದ ಆಹಾರ ಸಾಮಾಗ್ರಿಗಳನ್ನು ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ನಾವು ತಿಳಿ ಹೇಳಿದೆವು. ಅದಕ್ಕಾಗಿ ಅವರು ನಮ್ಮೊಂದಿಗೆ ಜಗಳವಾಡಿದರು. ಕೆಲವರು ಕ್ರಿಶ್ಚಿಯನ್ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳ ಮೇಲೆ ನಾವು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದೇವೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಸದಸ್ಯರ ಮನವಿಯ ಹಿನ್ನೆಲೆಯಲ್ಲಿ ಗ್ರಾಮಾಧಿಕಾರಿ ಹಾಗೂ ವಾರ್ಡ್ ಸದಸ್ಯ ಶನಿವಾರ ಅವರಿಗೆ ಬೇರೊಂದು ಶಿಬಿರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು. ಅನಂತರ ಅವರು ನಮ್ಮ ಶಿಬಿರದಿಂದ ತೆರಳಿದರು. ಇದು ನಮಗೆ ಅವಮಾನಿಸಿರುವುದು. ಇದನ್ನು ಪ್ರತಿಭಟಿಸಲು ನಾವು ನಿರ್ಧರಿಸಿದ್ದೇವೆ ಎಂದು ಟಿನು ವಿಜಯನ್ ತಿಳಿಸಿದ್ದಾರೆ. ಶಿಬಿರದಲ್ಲಿ ನಮ್ಮ ಮಹಿಳೆ ಹಾಗೂ ಹೆಣ್ಣು ಮಕ್ಕಳ ವೀಡಿಯೊಗಳನ್ನು ಸೆರೆ ಹಿಡಿಯಲಾಗುತ್ತಿದೆ. ಆದುದರಿಂದ ನಾವು ಆ ಪರಿಹಾರ ಶಿಬಿರ ತ್ಯಜಿಸಿದೆವು ಎಂದು ಕ್ರಿಶ್ಚಿಯನ್ ಸಮುದಾಯದ ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News