ಸ್ವಾಮಿ ಅಗ್ನಿವೇಶ್ ಮೇಲೆ ದಾಳಿ: ಪ್ರಕರಣ ದಾಖಲು

Update: 2018-08-19 16:35 GMT

ಹೊಸದಿಲ್ಲಿ,ಆ.19: ಶುಕ್ರವಾರ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಲು ತೆರಳಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಕೇಂದ್ರಕಚೇರಿಯ ಹೊರಗೆ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸ್ವಾಮಿ ಅಗ್ನಿವೇಶ್ ಪರ ವಿಠಲ ರಾವ್ ಎನ್ನುವವರು ಸಂಸತ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದಾಳಿಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಸ್ಥಳದಲ್ಲಿ ಪೊಲೀಸರಿದ್ದರೂ ದಾಳಿಕೋರರು ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆಯನ್ನು ಮುಂದುವರಿಸಿದ್ದರು. ಇದು ಕಾನೂನು ಮತ್ತು ಪ್ರಜಾಪ್ರಭುತ್ವ ವೌಲ್ಯಗಳಿಗೆ ವಿರುದ್ಧವಾಗಿದೆ ಎಂದು ರಾವ್ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸ್ವಾಮಿ ಅಗ್ನಿವೇಶ ಅವರಿಗೆ ಪೊಲೀಸ್ ರಕ್ಷಣೆಯನ್ನು ಒದಗಿಸುವಂತಯೂ ರಾವ್ ಕೋರಿದ್ದಾರೆ.

ಇದು ಒಂದೇ ತಿಂಗಳ ಅವಧಿಯಲ್ಲಿ ಸ್ವಾಮಿ ಅಗ್ನಿವೇಶ್ ಮೇಲೆ ನಡೆದಿರುವ ಎರಡನೇ ದಾಳಿಯಾಗಿದೆ. ಜು.17ರಂದು ಜಾರ್ಖಂಡ್‌ನ ಪಾಕುರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಅವರಿಗೆ ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾದ ಗುಂಪೊಂದು ಹಲ್ಲೆ ನಡೆಸಿತ್ತು. ಆ ಪ್ರಕರಣದಲ್ಲಿ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News