ಕತರ್ ಪ್ರಜೆಗಳಿಗೆ ಸೌದಿ ಹಜ್ ಪ್ರವೇಶ ನಿರಾಕರಿಸುತ್ತಿದೆ: ಆರೋಪ

Update: 2018-08-19 16:53 GMT

ದೋಹ, ಆ.19: ಕತರ್ ಹಾಗೂ ಸೌದಿ ಅರೇಬಿಯ ಮಧ್ಯೆ ರಾಜತಾಂತ್ರಿಕ ಭಿನ್ನಾಭಿಪ್ರಾಯ ನೆಲೆಸಿರುವ ಪರಿಣಾಮವಾಗಿ ಸೌದಿ ಅರೇಬಿಯ, ಕತರ್ ಪ್ರಜೆಗಳಿಗೆ ವಾರ್ಷಿಕ ಹಜ್ ಯಾತ್ರೆಗೆ ಪ್ರವೇಶವನ್ನು ನಿರಾಕರಿಸಿದೆ ಎಂದು ಕತರ್ ಆರೋಪಿಸಿದೆ.

ಈ ಸಂಬಂಧ ಕತರ್ ಸರಕಾರಿ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯಲ್ಲಿ, ಈ ವರ್ಷ ಕತರ್ ಪ್ರಜೆಗಳು ಮತ್ತು ನಿವಾಸಿಗಳು ಹಜ್‌ಗೆ ತೆರಳುವ ಯಾವ ಸಾಧ್ಯತೆಗಳೂ ಇಲ್ಲ ಎಂದು ತಿಳಿಸಿದ್ದಾರೆ. ಹಜ್ ಯಾತ್ರೆಗೆ ತೆರಳಲು ಕತರ್ ನಡೆಸುತ್ತಿದ್ದ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಎರಡು ದೇಶಗಳ ಮಧ್ಯೆ ರಾಜತಾಂತ್ರಿಕ ಸಂಪರ್ಕ ಕಡಿದು ಹೋಗಿರುವುದರಿಂದ ಕತರ್ ಪ್ರಜೆಗಳಿಗೆ ಸೌದಿಗೆ ವೀಸಾ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕತರ್ ಮತ್ತು ಸೌದಿ ಅರೇಬಿಯ ಮಧ್ಯೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಿದೆ. ಕತರ್, ಸೌದಿ ಅರೇಬಿಯಕ್ಕೆ ತೆರಳುವ ಎಲ್ಲ ವೈಮಾನಿಕ ಸೇವೆಗಳನ್ನು ರದ್ದುಗೊಳಿಸಿದೆ ಮತ್ತು ಎಲ್ಲ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧವನ್ನು ಕಡಿದು ಹಾಕಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸೌದಿ ಅರೇಬಿಯ, ಕತರ್ ಹಜ್ ಯಾತ್ರಾರ್ಥಿಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳುತ್ತಾ ಪವಿತ್ರ ಸ್ಥಳಕ್ಕೆ ಕತರ್ ಯಾತ್ರಿಕರಿಗೆ ಪ್ರವೇಶವನ್ನು ನಿರಾಕರಿಸಿಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News