ಊರುಬೈಲು ಸೇತುವೆ ನೀರು ಪಾಲು: ಸಂಪರ್ಕ ಕಡಿತ

Update: 2018-08-19 17:07 GMT

ಸುಳ್ಯ, ಆ. 19: ಕೊಡಗಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮತ್ತು ಜೋಡುಪಾಲ-ಮದೆನಾಡು ಗುಡ್ಡ ಕುಸಿತದ ಮತ್ತು ಪಯಸ್ವಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದ ಪರಿಣಾಮ 5 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಸಂಪಾಜೆ ಸಮೀಪದ ಊರುಬೈಲು ಸೇತುವೆ ನೀರುಪಾಲಾಗಿ, ರಸ್ತೆ ಸಂಚಾರಕ್ಕೆ ಸ್ಥಗಿತಗೊಂಡಿದೆ.

ಸಂಪಾಜೆ ಗ್ರಾಮದಿಂದ ಮಾರ್ಪಡ್ಕಕ್ಕಾಗಿ ಊರುಬೈಲು ಸಂಪರ್ಕ ಸಾಧಿಸಲು ಮಾರ್ಪಡ್ಕ ಎಂಬಲ್ಲಿ ಸುಮಾರು 5 ವರ್ಷದ ಹಿಂದೆ ಉದ್ಯೋಗ ಖಾತರಿ ಯೋಜನೆಯಲ್ಲಿ ಸೇತುವೆಯು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಜನಮನ್ನಣೆಗಳಿಸಿತ್ತು. ಈಗ ಭಾರೀ ಮಳೆಯ ಹಿನ್ನೆಲೆಯಲ್ಲಿ ಕಳೆದ ವಾರ ಈ ಸೇತುವೆಯ ಫಿಲ್ಲರ್‌ಗೆ ಬೃಹದಾಕಾರದ ಮರಗಳು ಬಂದು ಗುದ್ದಿ ಸೇತುವೆಯ ಫಿಲ್ಲರ್ ವಾಲಿ ಅಪಾಯವನ್ನು ಆಹ್ವಾನಿಸುತ್ತಿತ್ತು. ಇದೀಗ ಸೇತುವೆ ನೀರುಪಾಲಾಗಿದೆ.

ಈ ಸೇತುವೆ ಸುಮಾರು ಸಾವಿರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಅಲ್ಲದೆ ಸುಳ್ಯ ಮತ್ತು ಮಡಿಕೇರಿ ಶಾಲಾ-ಕಾಲೇಜುಗಳಿಗೆ ಹೋಗುವ ನೂರಾರು ಮಕ್ಕಳಿದ್ದಾರೆ. ಊರುಬೈಲು ಸೇತುವೆ ಸಂಪರ್ಕ ಕಡಿತಗೊಂಡರೆ ಚೆಂಬು, ಆನ್ಯಳ, ಕಾಂತಬೈಲು, ದಬ್ಬಡ್ಕ ಇತರ ಕಡೆಗಳಿಗೆ ಸಂಪರ್ಕ ಕೊಂಡಿ ಕಳಚಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News