‘ಲುಲು’ ಯೂಸುಫ್ ಅಲಿ, ಕೆ.ಪಿ. ಹುಸೈನ್, ಬಿ.ಆರ್. ಶೆಟ್ಟಿಯಿಂದ ಕೇರಳಕ್ಕೆ ನೆರವು

Update: 2018-08-19 17:34 GMT

ದುಬೈ, ಆ.19: ಯುಎಇಯಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಗಳು ಕೇರಳದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 12.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಹಲವು ದಿನಗಳಿಂದ ತೀವ್ರ ಮಳೆಬಾಧಿತವಾಗಿರುವ ಕೇರಳದಲ್ಲಿರುವ ಎಲ್ಲ ಅಣೆಕಟ್ಟುಗಳ ಎಲ್ಲ ದ್ವಾರಗಳನ್ನು ತೆರೆಯಲಾಗಿದ್ದು ರಾಜ್ಯದ 14 ಜಿಲ್ಲೆಗಳ ಪೈಕಿ 11 ಜಿಲ್ಲೆಗಳು ಜಲಾವೃತಗೊಂಡಿವೆ. ರಾಜ್ಯದ ನೂರು ವರ್ಷಗಳ ಇತಿಹಾಸದಲ್ಲೇ ಅತ್ಯಂತ ಭೀಕರ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿರುವ ದೇವರ ನಾಡು ಎಂದೇ ಕರೆಯಲಾಗುವ ಕೇರಳದಲ್ಲಿ ಮೂಲಭೂತ ಸೌಕರ್ಯಗಳು, ಬೆಳೆದು ನಿಂತ ಬೆಳೆಗಳು ಮತ್ತು ಪ್ರವಾಸೋದ್ಯಮ ಪ್ರವಾಹದಲ್ಲಿ ಸಂಪೂರ್ಣ ಕೊಚ್ಚಿ ಹೋಗಿದೆ.

ಲುಲು ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಕೇರಳ ಮೂಲದ ಯುಎಇಯಲ್ಲಿ ನೆಲೆಸಿರುವ ಯೂಸುಫ್ ಅಲಿ ಎಂ.ಎ ಕೇರಳ ಪರಿಹಾರ ನಿಧಿಗೆ ಐದು ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಫಾತಿಮ ಹೆಲ್ತ್‌ಕೇರ್ ಗ್ರೂಪ್‌ನ ಕೆ.ಪಿ ಹುಸೈನ್ 5 ಕೋಟಿ ರೂ. ನೀಡಿದ್ದಾರೆ. ಇದರಲ್ಲಿ ಹತ್ತು ಕೋಟಿ ರೂ. ನೇರವಾಗಿ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹೋದರೆ ಉಳಿದ ಮೊತ್ತವನ್ನು ವೈದ್ಯಕೀಯ ಪರಿಹಾರ ನೆರವಿಗೆ ನೀಡಲಾಗುವುದು ಎಂದು ಹುಸೈನ್ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಪರಿಹಾರ ಶಿಬಿರಗಳಿಗೆ ತನ್ನ ಸಂಸ್ಥೆಯ ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ಸ್ವಯಂ ಸೇವಕರಾಗಿ ಕಳುಹಿಸಲು ಅವಕಾಶ ನೀಡುವಂತೆ ರಾಜ್ಯ ಆರೋಗ್ಯ ಕಾರ್ಯದರ್ಶಿಯ ಜೊತೆ ಮಾತುಕತೆ ನಡೆಸಿರುವುದಾಗಿ ಹುಸೈನ್ ತಿಳಿಸಿದ್ದಾರೆ. ಯೂನಿಮೊನಿ ಮತ್ತು ಯುಎಇ ಎಕ್ಸ್‌ಚೇಂಜ್‌ನ ಮುಖ್ಯಸ್ಥ, ಭಾರತೀಯ ಮೂಲದ ಬಿ.ಆರ್ ಶೆಟ್ಟಿ 2 ಕೋಟಿ ರೂ., ಆ್ಯಸ್ಟರ್ ಡಿಎಂ ಹೆಲ್ತ್‌ಕೇರ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಝಾದ್ ಮೂಪೆನ್ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಜೊತೆಗೆ ಸಂಸ್ಥೆಯ ಮುನ್ನೂರು ಸ್ವಯಂ ಸೇವಕರನ್ನೊಳಗೊಂಡ ವಿಪತ್ತು ನಿರ್ವಹಣ ತಂಡವನ್ನು ಕೇರಳಕ್ಕೆ ಕಳುಹಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News