ದಾವೂದ್ ಇಬ್ರಾಹಿಂನ ಆರ್ಥಿಕ ಪ್ರಬಂಧಕ ಜಬೀರ್ ಮೋತಿ ಬಂಧನ

Update: 2018-08-19 17:44 GMT

ಲಂಡನ್, ಆ.19: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದ ಜಬೀರ್ ಮೋತಿ ಎಂಬಾತನನ್ನು ಲಂಡನ್‌ನ ಹಿಲ್ಟನ್ ಹೊಟೇಲ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಆಮೂಲಕ 1993ರ ಮುಂಬೈ ಸ್ಫೋಟದ ಆರೋಪಿಯಾಗಿರುವ ಭೂಗತ ಪಾತಕಿಯನ್ನು ಕಾನೂನಿನ ಚೌಕಟ್ಟಿಗೆ ತರುವ ಕಾನೂನು ಅಧಿಕಾರಿಗಳ ಶ್ರಮಕ್ಕೆ ಮತ್ತೊಂದು ಫಲ ದೊರೆತಿದೆ. ಜಬೀರ್ ಮೋತಿ ಹಾಗೂ ದಾವೂದ್, ಆತನ ಪತ್ನಿ ಮತ್ತು ಕರಾಚಿ ಹಾಗೂ ದುಬೈಯಲ್ಲಿರುವ ಇತರ ನಿಕಟ ಸಂಬಂಧಿಗಳ ಮಧ್ಯೆ ನಡೆಯುತ್ತಿದ್ದ ಆರ್ಥಿಕ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ ಲಂಡನ್ ಪೊಲೀಸರ ನಿರಂತರ ಶ್ರಮದಿಂದ ಜಬೀರ್‌ನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಹತ್ತು ವರ್ಷಗಳ ಅವಧಿಯ ವೀಸಾದೊಂದಿಗೆ ಲಂಡನ್‌ನಲ್ಲಿ ನೆಲೆಸಿರುವ ಪಾಕಿಸ್ತಾನಿ ಮೂಲದ ಜಬೀರ್ ಹಾಗೂ ದಾವೂದ್, ಆತನ ಪತ್ನಿ ಮೆಹಜಬೀನ್, ಪುತ್ರ ಮೊಯಿನ್ ನವಾಝ್, ಪುತ್ರಿಯರಾದ ಮಹರೂಕ್ ಮತ್ತು ಮೆಹ್ರೀನ್ ಹಾಗೂ ಅಳಿಯಂದಿರಾದ ಜುನೈದ್ ಮತ್ತು ಔರಂಗಝೇಬ್ ಮಧ್ಯೆ ನಡೆಯುತ್ತಿದ್ದ ಆರ್ಥಿಕ ವ್ಯವಹಾರಗಳ ಮೇಲೆ ಲಂಡನ್ ಪೊಲೀಸ್ ನಿಗಾಯಿರಿಸಿದ್ದರು. ದಾವೂದ್‌ನ ಕೊನೆಯ ಪುತ್ರಿ ಮಝಿಯಾ ಅವಿವಾಹಿತರಾಗಿದ್ದಾರೆ.

ಪಾಕಿಸ್ತಾನ, ಮಧ್ಯಪ್ರಾಚ್ಯ, ಬ್ರಿಟನ್, ಯೂರೋಪ್, ಆಫ್ರಿಕ ಮತ್ತು ಆಗ್ನೇಯ ಏಶ್ಯಾದಲ್ಲಿ ಹರಡಿರುವ ದಾವೂದ್‌ನ ವ್ಯವಹಾರದಲ್ಲಿ ಮಾಡಲಾಗಿರುವ ಹೂಡಿಕೆಯಲ್ಲಿ ಜಬೀರ್ ಭಾಗಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.

ಕೆಲವು ವರ್ಷಗಳಿಂದ ಜಬೀರ್, ಬಾರ್ಬಡೋಸ್, ಆ್ಯಂಟಿಗುವ, ಡೊಮಿನಿಕ್ ಗಣರಾಜ್ಯ ಹಾಗೂ ಹಂಗೇರಿಯ ಪೌರತ್ವವನ್ನು ಪಡೆಯಲು ಯೋಚಿಸಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸದ್ಯ ಜಬೀರ್ ಮೋತಿಯ ಬಂಧನದಿಂದ ಲಂಡನ್ ಪೊಲೀಸರು ಡಿ ಕಂಪೆನಿ ಸದಸ್ಯರು ಬ್ರಿಟನ್‌ನಲ್ಲಿ ನಡೆಸುತ್ತಿರುವ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸಹಾಯವಾಗಲಿದೆ. ಜೊತೆಗೆ ಬಿಟನ್ ಹಾಗೂ ಯೂರೋಪ್‌ನಲ್ಲಿ ಡಿ ಕಂಪೆನಿ ನಡೆಸಲು ಉದ್ದೇಶಿಸಿರುವ ವಿಧ್ವಂಸಕ ಕೃತ್ಯಗಳ ಬಗ್ಗೆಯೂ ತಿಳಿಯಲು ನೆರವಾಗಲಿದೆ.

ಅಕ್ರಮ ಶಸ್ತ್ರಾಸ್ತ್ರ ವ್ಯವಹಾರ, ಮಾದಕದ್ರವ್ಯ ವ್ಯಾಪಾರ, ಹಫ್ತಾ ಹಾಗೂ ರಿಯಲ್ ಎಸ್ಟೇಟ್ ದಂಧೆಯ ಮೂಲಕ ಬರುತ್ತಿದ್ದ ಆದಾಯವನ್ನು ದಾವೂದ್ ಭಾರತ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಲು ಉಗ್ರರಿಗೆ ಆರ್ಥಿಕ ನೆರವು ನೀಡಲು ಬಳಸುತ್ತಿದ್ದ ಎಂದು ವರದಿ ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News