ಮಂಗಳೂರು: ಡಿ. ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆ

Update: 2018-08-20 12:49 GMT

ಮಂಗಳೂರು, ಆ.20: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಿಂದುಳಿದ ಜಾತಿಗಳ ಒಕ್ಕೂಟದ ಆಶ್ರಯದಲ್ಲಿ ಕುದ್ರೋಳಿ ಶ್ರೀ ನಾರಾಯಣಗುರು ಕಾಲೇಜಿನಲ್ಲಿ ಇಂದು ಡಿ. ದೇವರಾಜ ಅರಸು ಅವರ 104ನೇ ಜನ್ಮ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಾಮದಪದವು ಸಪ್ರದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಶೋಕ್‌ಕುಮಾರ್ ಬಾವಿಕಟ್ಟೆ, ಹಿಂದುಳಿದ ವರ್ಗದವರ ಸ್ವಾಭಿಮಾನಿ ಬದುಕಿಗೆ ದಾರಿದೀಪವಾದವರು ಡಿ. ದೇವರಾಜ ಅರಸುರವರು ಎಂದರು.

ಅವರು ಅರಸುಮನೆತದಲ್ಲಿ ಹುಟ್ಟಿದ್ದರೂ ಅವರು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಹಿಂದುಳಿದ ವರ್ಗದವರಿಗೆ ರಾಜಕೀಯ, ಸಾಮಾಜಿಕ ಸ್ಥಾನಮಾನದಲ್ಲಿ ಮೀಸಲಾತಿ ಕಲ್ಪಿಸಿಕೊಟ್ಟು ಅವರು ಔನತ್ಯಕ್ಕೇರುವಂತೆ ಮಾಡಿದ ಶ್ರೇಷ್ಠ ನಾಯಕ ಡಿ. ದೇವರಾಜು ಅರಸು. ಅರಸು ಅವರ ವ್ಯಕ್ತಿತ್ವ ಮತ್ತು ಬದ್ಧತೆ ಪ್ರಸ್ತುತ ಯುವಜನೆಗೆ ಮಾದರಿ ಎಂದು ಅಭಿಪ್ರಾಯಿಸಿದರು.

ಜೀತದಾಳು ಪದ್ಧತಿಯನ್ನು ವಿಮೋಚನೆ ಮಾಡಿ ಕಾನೂನು ರೂಪಿಸಿದ ಅವರು, ಧೀಮಂತ ವ್ಯಕ್ತಿತ್ವದಿಂದ ಹೆಸರುವಾಸಿಯಾದವರು. ಹಿಂದುಳಿದವರಿಗೆ, ದುರ್ಬಲರಿಗೆ ಉದ್ಯೋಗ, ರಾಜಕೀಯ ಮತ್ತು ಇತರೆಲ್ಲ ಕ್ಷೇತ್ರಗಳಲ್ಲಿ ಸಾಮಾಜಿಕ ಸ್ಥಾನಮಾನ ನೀಡಿ ಸ್ಫೂರ್ತಿ ತುಂಬಿದ ನಾಯಕ ಎಂದವರು ಹೇಳಿದರು.
ಒಕ್ಕೂಟದ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಪ್ರ.ಕಾರ್ಯದರ್ಶಿ ಎಂ. ಜಯಾನಂದ ದೇವಾಡಿಗ, ಉಪಾಧ್ಯಕ್ಷ ಎ. ಕೆ. ಭಂಡಾರಿ, ಖಜಾಂಚಿ ಪುರುಷೋತ್ತಮ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಒಕ್ಕೂಟದ ಮಹಾಸಭೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News